ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪ: ಕೇರಳ ಪೊಲೀಸರಿಂದ 17 ಪ್ರಕರಣಗಳು ದಾಖಲು
ಚಿತ್ರನಟ ಸಿದ್ದೀಕ್ | PC : X
ಹೊಸದಿಲ್ಲಿ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕನಿಷ್ಠ 17 ಪ್ರಕರಣಗಳನ್ನು ಕೇರಳ ಪೊಲೀಸರು ದಾಖಲಿಸಿದ್ದಾರೆ. ಯುವನಟಿಯೊಬ್ಬಳು ನೀಡಿದ ದೂರನ್ನು ಆಧರಿಸಿ, ಮಲಯಾಳಂ ಚಿತ್ರನಟ ಸಿದ್ದೀಕ್ ವಿರುದ್ಧ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದೆ.
2016ರಲ್ಲಿ ಸಿದ್ದೀಕ್ ಅವರು ತಿರುವನಂತಪುರದ ಹೊಟೇಲ್ ಒಂದರಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ದೂರಿನಲ್ಲಿ ಆಪಾದಿಸಿದ್ದಾರೆ. ಆಗ ತನಗೆ 21 ವರ್ಷವಾಗಿತ್ತೆಂದು ಆಕೆ ಹೇಳಿದ್ದಾರೆ.
2019ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ʼಮೀಟೂʼ ಆಂದೋಲನ ನಡೆದಾಗ ತಾನು ಈ ಘಟನೆಯನ್ನು ಬಹಿರಂಗಪಡಿಸಿದ್ದೆ. ಆ ಬಳಿಕ ತನಗೆ ಮಲಯಾಳಂಚಿತ್ರರಂಗದಲ್ಲಿ ಅವಕಾಶಗಳನ್ನು ನಿರಾಕರಿಸಲಾಗಿತ್ತೆಂದು ಅವರು ಆರೋಪಿಸಿದ್ದಾರೆ.
ಇನ್ನೋರ್ವ ಮಲಯಾಳಂ ನಟಿ ಕೂಡಾ 2013ರಲ್ಲಿ ಚಿತ್ರೀಕರಣವೊಂದರ ಸಂದರ್ಭ ನಟನೊಬ್ಬ ತನ್ನನ್ನು ತಬ್ಬಿಹಿಡಿದು ಲೈಂಗಿಕವಾಗಿ ಪೀಡಿಸಿದ್ದಾನೆಂದು ಆರೋಪಿಸಿ, ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಮತ್ತೊಬ್ಬ ನಟಿಯೂ ಕೂಡಾ ಮಲಯಾಳಂ ಚಿತ್ರರಂಗದಲ್ಲಿ ತನಗಾದ ಲೈಂಗಿಕ ಕಿರುಕುಳದ ಅನುಭವಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯ ದೂರನ್ನು ಆಧರಿಸಿ ನಟರಾದ ಜಯಸೂರ್ಯ, ಮುಕೇಶ್, ಇಡವೇಳ ಬಾಬು ಹಾಗೂ ಮನಿಯಾನ್ಪಿಳ್ಲಾ ರಾಜು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಆರೋಪಗಳ ತನಿಖೆಗಾಗಿ ಕೇರಳ ಸರಕಾರವು ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) , ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಬಂಗಾಳಿ ಚಿತ್ರನಟಿಯೊಬ್ಬರು ಮಾಡಿರುವ ಲೈಂಗಿಕ ದುರ್ವರ್ತನೆಯ ಆರೋಪದ ಬಗ್ಗೆಯೂ ಆಕೆಯಿಂದ ಎಸ್ಐಟಿ ರಹಸ್ಯ ಹೇಳಿಕೆಯೊಂದನ್ನು ದಾಖಲಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಂಜಿತ್ ಅವರನ್ನು ಕರಾವಳಿ ಎಐಜಿ ಪೂಂಗುಳಲಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ʼಮನೋರಮಾʼ ಸುದ್ದಿಸಂಸ್ಥೆ ವರದಿ ಮಾಡಿದೆ.