ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಸಹ ಪ್ರಯಾಣಿಕ ಬಂಧನ
ಮುಂಬೈ: ತಡರಾತ್ರಿ ವಾಯುಯಾನ ಸಂದರ್ಭದಲ್ಲಿ ವಿಮಾನದ ದೀಪಗಳನ್ನು ಮಬ್ಬುಗೊಳಿಸಿದಾಗ ಪ್ರಯಾಣಿಕನೊಬ್ಬ ಆರ್ಮ್‍ರೆಸ್ಟ್ ಮೇಲೆತ್ತಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದೆ. ಮುಂಬೈನಿಂದ ಗುವಾಹತಿಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.
ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಿ ಗುವಾಹತಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಗೊ ವಿಮಾನಯಾನ ಕಂಪನಿ ಹೇಳಿಕೆ ನಿಡಿದೆ. ಕಳೆದ ಎರಡು ತಿಂಗಳಲ್ಲಿ ಸಂಭವಿಸಿದ ಇಂಥ ನಾಲ್ಕನೇ ಪ್ರಕರಣ ಇದಾಗಿದೆ.
ಶನಿವಾರ ರಾತ್ರಿ 9 ಗಂಟೆಗೆ ಮುಂಬೈನಿಂದ ಹೊರಟಿದ್ದ ವಿಮಾನ ಮಧ್ಯರಾತ್ರಿ 11.45ಕ್ಕೆ ಗುವಾಹತಿಗೆ ಬಂದಿಳಿಯಿತು. ಘಟನೆಯ ಬಗ್ಗೆ ವಿವರ ನೀಡಿರುವ ಮಹಿಳೆ, "ನಾನು ಪಕ್ಕದ ಸೀಟಿನಲ್ಲಿ ಕುಳಿತಿದ್ದು, ವಿಮಾನದ ದೀಪಗಳನ್ನು ಮಬ್ಬುಗೊಳಿಸಿದ ಸಂದರ್ಭ ಆರ್ಮ್‍ರೆಸ್ಟ್ ಕೆಳಕ್ಕೆ ಮಾಡಿ ನಿದ್ದೆಗೆ ಜಾರಿದ್ದೆ. ಎಚ್ಚರವಾದಾಗ ಆರ್ಮ್‍ರೆಸ್ಟ್ ಮೇಲೆ ಎತ್ತಲಾಗಿತ್ತು ಹಾಗೂ ಪುರುಷ ಸಹ ಪ್ರಯಾಣಿಕ ತೀರಾ ಸನಿಹದಲ್ಲಿ ಕುಳಿತಿದ್ದ" ಎಂದು ಹೇಳಿದರು.
"ಆರ್ಮ್‍ರೆಸ್ಟ್ ಕೆಳಕ್ಕೆ ಮಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅರೆನಿದ್ರೆಯಲ್ಲಿ ಆ ಬಗ್ಗೆ ಯೋಚಿಸದೇ ಮತ್ತೆ ಕೆಳಕ್ಕೆ ಮಾಡಿ ನಿದ್ದೆ ಮಾಡಿದೆ. ಕೆಲ ಸಮಯದ ಬಳಿಕ ಎಚ್ಚರವಾದಾಗ ನನ್ನ ಮೈಮೇಲೆ ಸಹ ಪ್ರಯಾಣಿಕನ ಕೈ ಇತ್ತು. ಆತನ ಕಣ್ಣು ಮುಚ್ಚಿತ್ತು. ಆದ್ದರಿಂದ ನಾನು ಯಾವುದೇ ನಿರ್ಧಾರಕ್ಕೆ ಬಾರದೇ ಕಣ್ಣುಗಳನ್ನು ಮುಚ್ಚಿ ನಿದ್ದೆ ಮಾಡಿದಂತೆ ನಟಿಸಿದೆ" ಎಂದರು.
ಸ್ವಲ್ಪ ಸಮಯದ ಬಳಿಕ ಆತ ಮತ್ತೆ ಮೈ ತಡಕಾಡಿಕೊಂಡು ಅಸಭ್ಯವಾಗಿ ಸ್ಪರ್ಶಿಸಿದ. ನಾನು ಚೀರಿಕೊಳ್ಳಲು ಯತ್ನಿಸಿದೆ ಆದರೆ ಹಾಗೆ ಮಾಡಲಾಗದೇ ಸುಮ್ಮನಾದೆ. ಮತ್ತೆ ತಡಕಾಡಲು ಆರಂಭಿಸಿದಾಗ ಧೈರ್ಯ ತಂದುಕೊಂಡು ಆತನ ಕೈಗಳಿಂದ ಬಿಡಿಸಿಕೊಂಡು ಚೀರಿಕೊಂಡೆ. ಕೂಗಿಕೊಂಡು ದಿಪಗಳನ್ನು ಹಾಕಿ ಕ್ಯಾಬಿಬ್ ಸಿಬ್ಬಂದಿಯನ್ನು ಕರೆದೆ. ನಾನು ಕೂಗಿಕೊಂಡಾಗ ಆತ ಕ್ಷಮೆಯಾಚಿಸಿದ" ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.