ತಮಿಳು ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ ರಾಜಾರೋಷ: ನಟಿ ಕುಟ್ಟಿ ಪದ್ಮಿನಿ
PC: x.com/ndtv
ಚೆನ್ನೈ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಬಗೆಗಿನ ಆರೋಪಗಳು ವಿವಾದದ ಅಲೆ ಎಬ್ಬಿಸುತ್ತಿರುವಂತೆ ಪಕ್ಕದ ತಮಿಳುನಾಡಿನಲ್ಲೂ ಇದೇ ಕೂಗು ಕೇಳಿ ಬರುತ್ತಿದೆ. "ತಮಿಳು ಟೆಲಿವಿಷನ್ ಶೋ ಉದ್ಯಮದಲ್ಲಿ ಲೈಂಗಿಕ ಕಿರುಕುಳ ರಾಜಾರೋಷವಾಗಿದೆ ಮತ್ತು ಹಲವು ಮಂದಿ ಮಹಿಳೆಯರು ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಜನಪ್ರಿಯ ನಟಿ ಮತ್ತು ಟೆಲಿವಿಷನ್ ಧಾರಾವಾಹಿಗಳ ನಿರ್ಮಾಪಕಿ ಕುಟ್ಟಿ ಪದ್ಮಿನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಮೊದಲು ಲೈಂಗಿಕ ಕಿರುಕುಳದ ವಿಷಯವನ್ನು ಎತ್ತಿದ್ದ ಗಾಯಕಿ ಚಿನ್ಮಯಿ ಮತ್ತು ನಟ ಶ್ರೀರೆಡ್ಡಿ ವಿರುದ್ಧ ಹೇರಿರುವ ನಿಷೇಧದ ಬಗ್ಗೆ ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
"ವೈದ್ಯರು, ವಕೀಲರು, ಐಟಿಯಂತ ಇತರ ವೃತ್ತಿಗಳಂತೆ ಇದೂ ಒಂದು ವೃತ್ತಿ. ಇಲ್ಲಿ ಮಾಂಸದಂಧೆ ಏಕೆ ನಡೆಯಬೇಕು? ಇದು ತೀರಾ ಕೆಟ್ಟದು" ಎಂದರು.
"ಟಿವಿ ಧಾರಾವಾಹಿಗಳಲ್ಲಿ ನಿರ್ದೇಶಕರು ಮತ್ತು ತಂತ್ರಜ್ಞರು ಕಲಾವಿದೆಯರಿಂದ ಲೈಂಗಿಕ ಬಾಧ್ಯತೆಯನ್ನು ಆಗ್ರಹಿಸುತ್ತಾರೆ. ಹಲವು ಮಂದಿ ಮಹಿಳೆಯರು ಇದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡುವುದಿಲ್ಲ. ಕೆಲ ಮಹಿಳೆಯರು ಇದರಿಂದ ಸಾಕಷ್ಟು ದುಡಿಯಬಹುದು ಎಂದು ಸಹಿಸಿಕೊಳ್ಳುತ್ತಾರೆ" ಎಂದೂ ಹೇಳಿದ್ದಾರೆ.
ಇದನ್ನು ಬಹಿರಂಗಪಡಿಸಿದರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ದೂರುಗಳನ್ನು ಚಿತ್ರೋದ್ಯಮ ನಿಷೇಧಿಸುತ್ತದೆ ಎಂದು ಗಾಯಕಿ ಚಿನ್ಮಯಿ ಮತ್ತು ಶ್ರೀರೆಡ್ಡಿ ಪ್ರಕರಣವನ್ನು ಉಲ್ಲೇಖಿಸಿದರು.
#NDTVExclusive | "Sexually harassed as a child artist": Actor Kutty Padmini (@KuttyPadhmini) flags abuse in Tamil TV industry@jsamdaniel reports pic.twitter.com/6vcleOfChT
— NDTV (@ndtv) August 29, 2024