ಪನ್ನೂನ್ ಹತ್ಯೆ ಯತ್ನ: ಮತ್ತೊಬ್ಬ ಭಾರತೀಯ ಏಜೆಂಟ್ ಕೈವಾಡ ಆರೋಪಿಸಿದ ಎಸ್‍ಎಫ್‍ಜೆ

ಹೊಸದಿಲ್ಲಿ: ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನ ಪ್ರಕರಣದಲ್ಲಿ ಮತ್ತೊಬ್ಬ ಭಾರತೀಯ ಏಜೆಂಟ್ ಶಾಮೀಲಾಗಿರುವುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಗುರುತಿಸಿರುವ ಬಗ್ಗೆ ಪ್ರತ್ಯೇಕತಾವಾದಿ ಸಿಖ್ ಸಂಘಟನೆ ಸಿಖ್ ಫಾರ್ ಜಸ್ಟೀಸ್ (ಎಸ್‍ಎಫ್‍ಜೆ) ಮಂಗಳವಾರ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಪನ್ನೂನ್ ಹತ್ಯೆಗಾಗಿ ಜಿಎಸ್ ಹೆಸರಿನ ಈ ಏಜೆಂಟ್‍ಗೆ 15 ಸಾವಿರ ಡಾಲರ್ ನೀಡಲಾಗಿತ್ತು ಎಂದು ಎಸ್‍ಎಫ್‍ಜೆ ಪ್ರತಿಪಾದಿಸಿದೆ.
ಮಾಜಿ ಬೇಹುಗಾರಿಕೆ ಅಧಿಕಾರಿ ವಿಕಾಸ್ ಯಾದವ್ ಜಿಎಸ್‍ಗೆ ಹಣ ನೀಡಲು ವ್ಯವಸ್ಥೆ ಮಾಡಿದ್ದರು. ಇಬ್ಬರು ಏಜೆಂಟರು ಮತ್ತು ಡಿಎಎ ಮಾಹಿತಿದಾರರಿಗೆ ಈ ಹಣವನ್ನು ನೀಡಲಾಗಿದೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಮೆರಿಕದ ನ್ಯಾಯಾಂಗ ಇಲಾಖೆ ಕ್ರಮ ಕೈಗೊಂಡಿದೆ ಎಂದು ಎಸ್‍ಎಫ್‍ಜೆ ಹೇಳಿದೆ.
"ಗವರ್ನ್‍ಮೆಂಟ್ ಫಾರ್‍ಫೀಟರ್ ಬಿಲ್ ಆಫ್ ಪರ್ಟಿಕ್ಯುಲರ್ಸ್" ಹೆಸರಿನ ದಾಖಲೆಯನ್ನು ಎಸ್‍ಎಫ್‍ಜೆ ಬಿಡುಗಡೆ ಮಾಡಿದೆ. "ಅಮೆರಿಕ ಸರ್ಕಾರ ವರ್ಸಸ್ ಗ್ರಮ್ಮತಿಕೋಸ್ (24 ಸಿಆರ್,1980) ಅನುಸಾರ ಮೇಲೆ ಹೆಸರಿಸಿದ ಮೂವರು ದೋಷಾರೋಪಿತರ ಪೈಕಿ ಒಬ್ಬ ಮತ್ತು ಮುಟ್ಟುಗೋಲು ಆರೋಪದಲ್ಲಿ ಆರೋಪಿಸಿದಂತೆ ಮತ್ತು ಪೂರಕ ಆಸ್ತಿಗಳಲ್ಲಿ 15 ಸಾವಿರ ಡಾಲರ್ ಅಮೆರಿಕನ್ ಕರೆನ್ಸಿಯನ್ನು 2023ರ ಜೂನ್ 9ರಂದು ಜಿಎಸ್ ಎಂಬ ವ್ಯಕ್ತಿ ನ್ಯೂಯಾರ್ಕ್‍ನ 11ನೇ ಅವೆನ್ಯೂವಿನಲ್ಲಿರುವ 27ನೇ ಬೀದಿಯಲ್ಲಿ ನೀಡಿದ್ದ" ಎಂದು ದಾಖಲೆಯಲ್ಲಿ ವಿವರಿಸಲಾಗಿದೆ.
ಈ ಪ್ರಕರಣದಲ್ಲಿ ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಈಗಾಗಲೇ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತನನ್ನು ಬಂಧಿಸಿದ್ದು, ಈ ವರ್ಷದ ಮಧ್ಯದಿಂದ ವಿಚಾರಣೆ ಆರಂಭವಾಗುವ ನಿರೀಕ್ಷೆ ಇದೆ. ಕಳೆದ ಮಾರ್ಚ್‍ನಲ್ಲಿ ಗುಪ್ತಾ ಹಾಗೂ ಅಭಿಯೋಜನೆಗೆ ಆದೇಶ ನೀಡಿದ ಅಮೆರಿಕದ ಕೋರ್ಟ್, ಜೂನ್ ಅಥವಾ ಜುಲೈನಲ್ಲಿ ವಿಚಾರಣೆಯ ದಿನಾಂಕದ ಪ್ರಸ್ತಾವನೆಯನ್ನು ನೀಡುವ ಜಂಟಿ ಪತ್ರ ನೀಡುವಂತೆ ಸೂಚಿಸಿದೆ.