ಶರದ್ ಪವಾರ್ – ಅಜಿತ್ ಪವಾರ್ ರಹಸ್ಯ ಮಾತುಕತೆ?
ಅಜಿತ್ ಪವಾರ್, ಶರದ್ ಪವಾರ್ | Photo: PTI
ಮುಂಬೈ: NCP ಸಂಸ್ಥಾಪಕ ಶರದ್ ಪವಾರ್ ಹಾಗೂ ಅವರ ಸೋದರನ ಪುತ್ರ ಅಜಿತ್ ಪವಾರ್ ನಡುವೆ ಪುಣೆಯಲ್ಲಿ ರಹಸ್ಯ ಮಾತುಕತೆಗಳು ನಡೆದಿರುವ ಬಗ್ಗೆ ರಾಜಕೀಯ ವಲಯಗಳಲ್ಲಿ ದಟ್ಟವಾದ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಆ ಮಾತುಕತೆಯ ವಿವರಗಳು ತನಗೆ ತಿಳಿದುಬಂದಿಲ್ಲವೆಂದು NCP ಅಧ್ಯಕ್ಷ ಜಯಂತ ಪಾಟೀಲ್ ರವಿವಾರ ಹೇಳಿದ್ದಾರೆ. ಉಭಯ ನಾಯಕರು ಭೇಟಿಯಾಗಿರುವುದು ಹೌದಾದದರೂ, ಅವರ ನಡುವೆ ಯಾವುದೇ ರಹಸ್ಯ ಮಾತುಕತೆ ನಡೆದಿಲ್ಲವೆಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಶರದ್ ಹಾಗೂ ಅಜಿತ್ ಪವಾರ್ ನಡುವೆ ಯಾವುದೇ ಮಾತುಕತೆ ನಡೆದಿರುವ ಬಗ್ಗೆ ತನಗೆ ಮಾಹಿತಿಯಿಲ್ಲವೆಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ರಕರ್ತರೊಂದಿಗೆ ಮಾತನಾಡಿದ ಸಂದರ್ಭ ತಿಳಿಸಿದ್ದಾರೆ.
ಶರದ್ ಪವಾರ್ ಹಾಗೂ ಎನ್ಸಿಪಿಯ ಬಂಡುಕೋರ ಶಾಸಕರ ನೇತೃತ್ವ ವಹಿಸಿರುವ ಅಜಿತ್ ಪವಾರ್ ಅವರು ಶನಿವಾರ ಪುಣೆಯ ಉದ್ಯಮಿಯೊಬ್ಬರ ನಿವಾಸದಲ್ಲಿ ಭೇಟಿಯಾಗಿದ್ದರೆಂದು ಮಾಧ್ಯಮಗಳು ವರದಿ ಮಾಡಿದ್ದವು.
ಶರದ್ ಪವಾರ್ ಅವರು ಶನಿವಾರ ಮಧ್ಯಾಹ್ನ 1:00 ಗಂಟೆಯ ವೇಳೆಗೆ ಪುಣೆಯ ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿರುವ ಉದ್ಯಮಿಯೊಬ್ಬರ ನಿವಾಸಕ್ಕೆ ಆಗಮಿಸುತ್ತಿರುವ ದೃಶ್ಯಗಳನ್ನು ಪ್ರಾದೇಶಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು. ಅವರು ಸಂಜೆ 5:00 ಗಂಟೆಗೆ ಸ್ಥಳದಿಂದ ನಿರ್ಗಮಿಸಿದ್ದರು. ಅಜಿತ್ ಪವಾರ್ ಅವರು ಸಂಜೆ 6;45ರ ವೇಳೆಗೆ ಸ್ಥಳದಿಂದ ನಿರ್ಗಮಿಸಿದರು. ಈ ಸಂದರ್ಭ ಅವರು ಮಾಧ್ಯಮಗಳ ಕ್ಯಾಮರಾಗಳಿಂದ ತಪ್ಪಿಸಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿತ್ತು.
‘‘ಉಭಯ ಕುಶಲೋಪರಿ ವಿಚಾರಿಸಲು ನಾನು ಪವಾರ್ ಸಾಹೇಬರನ್ನು ಭೇಟಿಯಾಗಲು ಹೋಗಿದ್ದೆ. ಆದರೆ ಬೇಗನೇ ಅಲ್ಲಿಂದ ತೆರಳಿದ್ದೆ. ಅಲ್ಲಿ ಯಾವುದಾದರೂ ಮಾತುಕತೆ ನಡೆದಿರುವುದು ತನಗೆ ತಿಳಿದಿಲ್ಲ’’ ಎಂದು ಜಯಂತ್ ಸ್ಪಷ್ಟಪಡಿಸಿದರು.
ಜಾರಿನಿರ್ದೇಶನಾಲಯ (ಈ.ಡಿ.)ವು ಒಂದು ಕಂಪೆನಿಯ ಕುರಿತು ಮಾಹಿತಿ ಕೇಳಿ ತನ್ನ ಸಹೋದರನಿಗೆ ನೋಟಿಸ್ ಜಾರಿಗೊಳಿಸಿದೆಯೆಂದು ಜಯಂತ್ ಪಾಟೀಲ್ ಸುದ್ದಿಗಾರರಿಗೆ ತಿಸಿದರು.ಕೆಲವು ದಿನಗಳ ಹಿಂದೆ ತನ್ನ ಸಹೋದರ ಜಾರಿ ನಿರ್ದೇಶನಾಲಯಕ್ಕೆ ತೆರಳಿ, ತನಗೆ ತಿಳಿದಿರುವ ಎಲ್ಲಾ ವಿವರಗಳನ್ನು ಆತ ನೀಡಿದ್ದಾನೆ. ಶನಿವಾರ ಶರದ್ ಹಾಗೂ ಅಜಿತ್ ಪವಾರ್ ನಡುವೆ ನಡೆದ ಮಾತುಕತೆಗೂ, ಈಡಿ ನೋಟಿಸ್ಗೂ ನಂಟುಕಲ್ಪಿಸುವುದು ಸರಿಯಲ್ಲವೆಂದು ಜಯಂತ್ ಸ್ಪಷ್ಟಪಡಿಸಿದರು.
ತಾನು ಕೂಡಾ ಅಜಿತ್ ಪವಾರ್ ಬಣವನ್ನು ಸೇರುವ ಸಾಧ್ಯತೆಯಿದೆಯೆಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್ ಈ ಬಗ್ಗೆ ತನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ಅವರು ಹೇಳಿದ್ದಾರೆ. ಎನ್ಸಿಪಿಯಲ್ಲಿ ಯಾವುದೇ ಒಡಕು ಇಲ್ಲ. ಎರಡೂ ಬಣಗಳು ಶರದ್ ಪವಾರ್ ಅವರನ್ನು ತಮ್ಮ ನಾಯಕನೆಂದು ಒಪ್ಪಿಕೊಂಡಿವೆ ಎಂದವರು ಹೇಳಿದರು.