ಎನ್ ಸಿಪಿ ಅಜಿತ್ ಬಣಕ್ಕೆ ಹೀನಾಯ ಸೋಲು: ಶರದ್ ಪವಾರ್ ಭವಿಷ್ಯ
PC: fb.com
ಹೊಸದಿಲ್ಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಲಿದೆ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ. ಸೋಲಾಪುರದ ಮಾಧಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಅಜಿತ್ ಬಣದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನ ಪ್ರಬಲ ಸಂದೇಶ ರವಾನಿಸಿ ಎಂದು ಕರೆ ನೀಡಿದರು.
ದಶಕದಿಂದ ವಿಶ್ವಾಸ ದ್ರೋಹ ನಡೆದರೂ, ರಾಜಕೀಯವಾಗಿ ಬೆನ್ನಿಗೆ ಚೂರಿ ಹಾಕುವವರ ನಡುವೆಯೂ ತಮ್ಮ ಮಹತ್ವ ಉಳಿದುಕೊಂಡಿರುವುದನ್ನು ವಿವರಿಸಿದರು. 1980ರ ದಶಕದಲ್ಲಿ ಪಕ್ಷದ ಒಂದು ಬಣ ಬಂಡಾಯ ಎದ್ದ ಪರಿಣಾಮ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಕಳೆದುಕೊಂಡ ಘಟನೆಯನ್ನು ಪವಾರ್ ನೆನಪಿಸಿಕೊಂಡರು.
"ನಾನು ವಿದೇಶದಿಂದ ವಾಪಾಸ್ಸಾದಾಗ ನನ್ನದೇ ಪಕ್ಷದ 58 ಶಾಸಕರ ಪೈಕಿ 52 ಮಂದಿ ಅಂದಿನ ಮುಖ್ಯಮಂತ್ರಿ ಎ.ಆರ್.ಅಂತುಳೆ ಅವರ ಬಣ ಸೇರಿದ್ದು ನನ್ನ ಗಮನಕ್ಕೆ ಬಂತು. ನಾನು ವಿರೋಧ ಪಕ್ಷದ ಉಪನಾಯಕನ ಹುದ್ದೆ ಕಳೆದುಕೊಂಡೆ" ಎಂದರು.
"ತಕ್ಷಣ ಪ್ರತೀಕಾರ ಕೈಗೊಳ್ಳುವ ಬದಲು ಮೂರು ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಅಡ್ಡಾಡಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದೆ. 52 ಬಂಡುಕೋರರ ವಿರುದ್ಧ ಯುವಕರನ್ನು ಕಣಕ್ಕಿಳಿಸಿದೆ. ಮಹಾರಾಷ್ಟ್ರದ ಜನತೆ ಎಲ್ಲ 52 ಕ್ಷೇತ್ರಗಳಲ್ಲೂ ಗೆಲುವು ತಂದುಕೊಟ್ಟರು" ಎಂದು ಹೇಳಿದರು.
ಬಂಡಾಯ ಎದ್ದವರಿಗೆ ಪಾಠ ಕಲಿಸುವ ಮಹತ್ವವನ್ನು ಒತ್ತಿ ಹೇಳಿದ ಅವರು, ದೊಡ್ಡ ಪ್ರಮಾಣದಲ್ಲಿ ಸೋಲಿಸಬೇಕು ಎಂದು ಕರೆ ನೀಡಿದಾಗ ಜನತೆ ಪ್ರಚಂಡ ಕರತಾಡನದ ಮೂಲಕ ಅನುಮೋದಿಸಿದರು.