ಅಜಿತ್ ಪವಾರ್ರಿಂದ ರವಾನೆಯಾದ ಕಾಗದಗಳು ಚು. ಆಯೋಗ ತಲುಪಲು ಐದು ದಿನ ತೆಗೆದುಕೊಂಡಿದ್ದು ಹೇಗೆ?: ಶರದ್ ಪವಾರ್ ಪ್ರಶ್ನೆ
Photo: PTI
ಮುಂಬೈ: "ಈ ದೇಶದಲ್ಲಿ ಮುಖ್ಯ ಕಾಗದಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲುಪಲು ಐದು ದಿನ ತೆಗೆದುಕೊಂಡಿವೆ ಎಂಬ ಸಂಗತಿ ನನ್ನ ಗಮನಕ್ಕೆ ಬಂದಿದೆ" ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಗುರುವಾರ ನಡೆದ ಎನ್ಸಿಪಿ ಕಾರ್ಯಕಾರಿಣಿ ಸಮಿತಿಯ ಸಭೆಯು ಶರದ್ ಪವಾರ್ ಅವರಲ್ಲಿ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸವನ್ನು ವ್ಯಕ್ತಪಡಿಸಿತು ಹಾಗೂ ಬಿಜೆಪಿಯೊಂದಿಗೆ ಕೈಜೋಡಿಸಿರುವ ಪ್ರಫುಲ್ ಪಟೇಲ್, ಸುನೀಲ್ ತಾತ್ಕರೆ ಹಾಗೂ ಒಂಬತ್ತು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸುವ ಅವರ ನಿರ್ಧಾರವನ್ನು ಅನುಮೋದಿಸಿತು.
ಅಜಿತ್ ಪವಾರ್ ತಮ್ಮ ಬಣವನ್ನೇ ನೈಜ ಎಸ್ಸಿಪಿ ಎಂದು ಘೋಷಿಸಬೇಕು ಎಂದು ಜೂನ್ 30ರಂದು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ ಹಾಗೂ ಚುನಾವಣಾ ಆಯೋಗವು ಅಜಿತ್ ಪವಾರ್ ಅವರಿಗೆ ಬೆಂಬಲ ಸೂಚಿಸಿ ಎನ್ಸಿಪಿ ಶಾಸಕರು ಹಾಗೂ ಸಂಸದರ ನೀಡಿರುವ ಜೂನ್ 30ರ ದಿನಾಂಕ ನಮೂದಾಗಿರುವ ಪ್ರಮಾಣ ಪತ್ರಗಳನ್ನು ಬುಧವಾರದಂದು ಅಂಗೀಕರಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶರದ್ ಪವಾರ್, "ನಮಗೆ ಚುನಾವಣಾ ಆಯೋಗದ ಮೇಲೆ ಸಂಪೂರ್ಣ ನಂಬಿಕೆಯಿದೆ. ಕಾನೂನಾತ್ಮಕ ಸ್ಥಿತಿಗೆ ಸಂಬಂಧಪಟ್ಟಂತೆ ಹೇಳುವುದಾದರೆ ನಾವು ಆ ಆಯ್ಕೆಯ ಬಗ್ಗೆ ಚಿಂತಿಸಬಹುದು. ಆದರೆ, ಅಂತಹ ಸ್ಥಿತಿ ಉದ್ಭವಿಸಲಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ.
ತಮಗೆ ಮೂರನೆ ಎರಡರಷ್ಟು ಶಾಸಕರ ಬೆಂಬಲವಿದೆ ಎಂಬ ಪ್ರತಿಸ್ಪರ್ಧಿ ಬಣದ ಪ್ರತಿಪಾದನೆಯನ್ನು ತಳ್ಳಿ ಹಾಕಿರುವ ಪವಾರ್, ಈ ಕುರಿತು ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. "ಆದರೆ, ನನಗೆ ಒಂದು ಸಂಗತಿ ತಿಳಿದಿದೆ. ಜನರು ತಮ್ಮ ಬೆಂಬಲವನ್ನು ನಮಗೆ ನೀಡಿದ್ದಾರೆ" ಎಂದು ಅವರು ಹೇಳಿದ್ದಾರೆ.
ಶರದ್ ಪವಾರ್ ನಿವಾಸದಲ್ಲಿ ಜರುಗಿದ ಎರಡು ಗಂಟೆಗಳ ಅವಧಿಯ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಂಟು ಅಂಶಗಳ ಗೊತ್ತುವಳಿಯನ್ನು ಅಂಗೀಕರಿಸಲಾಗಿದ್ದು, "ಪಕ್ಷದ ರಾಜಕೀಯ ಮೌಲ್ಯಗಳು, ಮಾರ್ಗಸೂಚಿಗಳು, ತತ್ವಗಳು, ನೀತಿಗಳು ಮತ್ತು ಸಿದ್ಧಾಂತದ ವಿರುದ್ಧ ಹಾಗೂ ಪಕ್ಷದ ಹಿತಾಸಕ್ತಿಗೆ ಮಾರಕವಾಗಿ ವರ್ತಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಪಕ್ಷದ ಕಾರ್ಯಕಾರಿಣಿ ಸಮಿತಿಯು ಶರದ್ ಪವಾರ್ ಅವರಿಗೆ ಪರಮಾಧಿಕಾರ ನೀಡಿದೆ.
ಜುಲೈ 2ರಂದು ಅಜಿತ್ ಪವಾರ್ ಹಾಗೂ ಇನ್ನಿತರ ಎಂಟು ಮಂದಿ ಎನ್ಸಿಪಿ ಶಾಸಕರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.