ಮಹಾರಾಷ್ಟ್ರ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಶರದ್ ಪವಾರ್ ಕರೆ
ಶರದ್ ಪವಾರ್ | PC : PTI
ಪುಣೆ : ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಜ್ಜಾಗುವಂತೆ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಅವರು ಸೋಮವಾರ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿಯ ಪಕ್ಷದ ಕಚೇರಿಯಲ್ಲಿ ಪಕ್ಷದ 25ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು,‘ಕಳೆದ 25 ವರ್ಷಗಳಲ್ಲಿ ಪಕ್ಷದ ಸಿದ್ಧಾಂತವನ್ನು ಹರಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ ಮತ್ತು ಅದನ್ನು ಮುಂದುವರಿಸಲು ಒಂದಾಗಿ ಶ್ರಮಿಸೋಣ. ಮುಂದಿನ ಮೂರು ತಿಂಗಳುಗಳಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ ಮತ್ತು ಅದಕ್ಕಾಗಿ ಶ್ರಮಿಸುವುದು ನಮ್ಮ ಸಾಮೂಹಿಕ ಹೊಣೆಗಾರಿಕೆಯಾಗಿದೆ ’ ಎಂದು ಹೇಳಿದರು.
ಲೋಕಸಭಾ ಚುನಾವಣೆಗಳಲ್ಲಿ ಅವರ ಪಕ್ಷವು ಮಹಾರಾಷ್ಟ್ರದಲ್ಲಿ ಸ್ಪರ್ಧಿಸಿದ್ದ 10 ಸ್ಥಾನಗಳ ಪೈಕಿ ಎಂಟನ್ನು ಗೆದ್ದಿದೆ.
ಪವಾರ್ ಕಾಂಗ್ರೆಸ್ ನಿಂದ ಹೊರಬಂದ ಬಳಿಕ 1999ರಲ್ಲಿ ಎನ್ಸಿಪಿಯನ್ನು ಸ್ಥಾಪಿಸಿದ್ದರು. ಕಳೆದ ವರ್ಷದ ಜುಲೈನಲ್ಲಿ ಅಜಿತ ಪವಾರ್ ಮತ್ತು ಇತರ ಕೆಲವು ಶಾಸಕರು ರಾಜ್ಯದಲ್ಲಿಯ ಶಿವಸೇನೆ-ಬಿಜೆಪಿ ಸರಕಾರಕ್ಕೆ ಸೇರಿದ ಬಳಿಕ ಎನ್ಸಿಪಿ ವಿಭಜನೆಗೊಂಡಿತ್ತು.
ಈ ವರ್ಷದ ಫೆಬ್ರವರಿಯಲ್ಲಿ ಅಜಿತ ಪವಾರ್ ಬಣವನ್ನು ನೈಜ ಎನ್ಸಿಪಿ ಎಂದು ಘೋಷಿಸಿದ್ದ ಚುನಾವಣಾ ಆಯೋಗವು,ಪಕ್ಷದ ‘ಗಡಿಯಾರ’ ಚಿಹ್ನೆಯನ್ನು ಅದಕ್ಕೆ ನೀಡಿತ್ತು. ನಂತರ ಶರದ ಪವಾರ್ರ ಎನ್ಸಿಪಿ(ಎಸ್ಪಿ)ಗೆ ‘ಕಹಳೆಯೂದುತ್ತಿರುವ ವ್ಯಕ್ತಿ’ಯ ಚುನಾವಣಾ ಚಿಹ್ನೆಯನ್ನು ನೀಡಲಾಗಿತ್ತು.