‘2020 ದಿಲ್ಲಿ’ ಸಿನೆಮಾ ಬಿಡುಗಡೆ ಮುಂದೂಡಿಕೆ ಕೋರಿ ಶರ್ಜೀಲ್ ಇಮಾಮ್ ಅರ್ಜಿ
ಕೇಂದ, ಸಿಬಿಎಫ್ಸಿಯಿಂದ ವಿವರಣೆ ಕೇಳಿದ ದಿಲ್ಲಿ ಹೈಕೋರ್ಟ್

ಶರ್ಜೀಲ್ ಇಮಾಮ್ | PC : PTI
ಹೊಸದಿಲ್ಲಿ : ಈಶಾನ್ಯ ದಿಲ್ಲಿ ಗಲಭೆಗೆ ಸಂಬಂಧಿಸಿದ ‘‘ 2020 ದಿಲ್ಲಿ’ ಚಲನಚಿತ್ರವನ್ನು ಬಿಡುಗಡೆಯನ್ನು ಮುಂದೂಡಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಶರ್ಜೀಲ್ ಇಮಾಮ್ ಅವರು ಸಲ್ಲಿಸಿದ ಅರ್ಜಿಯ ಬಗ್ಗೆ ತಮ್ಮ ನಿಲುವನ್ನು ತಿಳಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಹಾಗೂ ಕೇಂದ್ರೀಯ ಸೆನ್ಸಾರ್ ಮಂಡಳಿಗೆ ಸೂಚಿಸಿದೆ.
ಈ ವಿಷಯವಾಗಿ ಕೇಂದ್ರದಿಂದ ನಿರ್ದೇಶನಗಳನ್ನು ಪಡೆದುಕೊಳ್ಳುವಂತೆ ನ್ಯಾಯಮೂರ್ತಿ ಸಚಿವ್ ದತ್ತಾ ಅವರು ಕೇಂದ್ರ ಸರಕಾರದ ಪರ ವಕೀಲರಿಗೆ ತಿಳಿಸಿದ್ದು, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.
ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಯ, ಕೇಂದ್ರೀಯ ಚಲನಚಿತ್ರ ಸೆನ್ಸಾರ್ ಮಂಡಳಿ (ಸಿಬಿಎಫ್ಸಿ), ದಿಲ್ಲಿ ಪೊಲೀಸ್ ಮತ್ತು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೂ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ದಿಲ್ಲಿ ವಿಧಾನಸಭೆಗೆ ಮೂರು ದಿನ ಮೊದಲು, ಫೆಬ್ರವರಿ 2ರಂದು ‘2020 ದಿಲ್ಲಿ’ ಚಿತ್ರ ಬಿಡುಗಡೆಗೊಳ್ಳಲಿದೆ. ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಗಲಭೆಗಳ ಹಿಂದೆ ದೊಡ್ಡ ಸಂಚಿರುವ ಬಗ್ಗೆ ಸುಳ್ಳು ವ್ಯಾಖ್ಯಾನವೊಂದನ್ನು ಸೃಷ್ಟಿಸುವ ಉದ್ದೇಶವನ್ನು ಈ ಚಿತ್ರವು ಹೊಂದಿದೆಯೆಂದು ಟೀಸರ್ ಹಾಗೂ ಟ್ರೇಲರ್ಗಳು,ಪೋಸ್ಟರ್ಗಳು ಮತ್ತು ಪ್ರಚಾರ ವೀಡಿಯೊಗಳಿಂದ ವ್ಯಕ್ತವಾಗುತ್ತದೆ ಎಂದು ಶ ರ್ಜೀಲ್ ಅವರು ಅರ್ಜಿಯಲ್ಲಿ ಆಪಾದಿಸಿದ್ದರು.
ಈಶಾನ್ಯದಿಲ್ಲಿ ಗಲಭೆ ಪ್ರಕರಣದಲ್ಲಿ ಶರ್ಜೀಲ್ ಇಮಾಮ್ ಅವರು ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯು ದಿಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯುಳಿದಿದೆ.