ಸ್ಪಷ್ಟ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ: ತರೂರ್
ಶಶಿ ತರೂರ್ | PC : PTI
ತಿರುವನಂತಪುರ: ಜಮ್ಮುಕಾಶ್ಮೀರದಲ್ಲಿ 26 ಜನರ ಮಾರಣಹೋಮದ ಬಳಿಕ ಉಭಯ ದೇಶಗಳ ನಡುವೆ ಉದ್ನಿಗ್ನತೆಗಳು ಹೆಚ್ಚುತ್ತಿರುವಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಪಹಲ್ಗಾಮ್ ದಾಳಿಯ ಬಳಿಕ ದೇಶವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮಕ್ಕಾಗಿ ಒತ್ತಾಯಿಸುತ್ತಿದೆ ಮತ್ತು ಆ ದೇಶದ ವಿರುದ್ಧ ಏನಾದರೂ ಸ್ಪಷ್ಟ ಸೇನಾ ಕಾರ್ಯಾಚರಣೆಯು ಅನಿವಾರ್ಯವಾಗಿದೆ ಎಂದು ರವಿವಾರ ಇಲ್ಲಿ ಹೇಳಿದರು.
ಪಾಕಿಸ್ತಾನವು ಗಡಿಯಾಚೆ ಜನರನ್ನು ಪ್ರಚೋದಿಸುತ್ತದೆ, ಭಯೋತ್ಪಾದಕರಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ,ಗಡಿಯಾಚೆಯಿಂದ ಮಾರ್ಗದರ್ಶನ ನೀಡುತ್ತಿದೆ. ಆದರೂ ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಹೊಣೆಗಾರಿಕೆಯನ್ನು ಯಾವಾಗಲೂ ನಿರಾಕರಿಸುತ್ತಲೇ ಬಂದಿದೆ. ಕಳೆದ ಕಾಲು ಶತಮಾನಕ್ಕೂ ಅಧಿಕ ಸಮಯದಿಂದಲೂ ಇದು ಅದರ ತಂತ್ರವಾಗಿದೆ. ಅಂತಿಮವಾಗಿ ವಿದೇಶಿ ಗುಪ್ತಚರ ಸಂಸ್ಥೆಗಳಿಂದಲೂ ಸೇರಿದಂತೆ ಅದರ ಹೊಣೆಗಾರಿಕೆಯು ಸಾಬೀತಾಗುತ್ತಿದೆ ಎಂದು ತರೂರ್ ಹೇಳಿದರು.
2016ರ ಉಡಿ ದಾಳಿಗಳು ಮತ್ತು 2019ರ ಪುಲ್ವಾಮಾ ದಾಳಿಯ ಬಳಿಕ ಭಾರತವು ಪ್ರತೀಕಾರ ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ಬೆಟ್ಟು ಮಾಡಿದ ತರೂರ್,ಪಾಕಿಸ್ಥಾನವು ಈ ಬಾರಿ ಭಾರತದಿಂದ ಹೆಚ್ಚು ಕಠಿಣ ಪ್ರತಿಕ್ರಿಯೆಯನ್ನು ಎದುರಿಸಬಹುದು ಎಂದರು.
ಭಾರತದಿಂದ ಸಿಂಧು ಜಲ ಒಪ್ಪಂದ ಅಮಾನತು ಕುರಿತು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರ,‘ನದಿಗಳಲ್ಲಿ ರಕ್ತ ಹರಿಯಲಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ತರೂರ್,‘ಅದು ಕೇವಲ ಉದ್ರೇಕದ ಮಾತು. ರಕ್ತ ಹರಿಯುವುದಾದರೆ ನಮಗಿಂತ ಅವರ ಕಡೆಯಿಂದ ಹೆಚ್ಚು ಹರಿಯುತ್ತದೆ ’ ಎಂದು ಹೇಳಿದರು.