ಸಂಜು ಸ್ಯಾಮ್ಸನ್ ರನ್ನು ಮತ್ತೆ ನಿರ್ಲಕ್ಷಿಸಿದ ಬಿಸಿಸಿಐ ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡ ಶಶಿ ತರೂರ್
ಶಶಿ ತರೂರ್ | Photo : PTI
ಹೊಸದಿಲ್ಲಿ: ಭಾರತ ಟಿ-20 ಕ್ರಿಕೆಟ್ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟಿರುವುದು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟಿ-20 ಸರಣಿಗಾಗಿ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ರೊಂದಿಗೆ ಹೊಸಬ ಜಿತೇಶ್ ಶರ್ಮ ಅವರನ್ನು ಎರಡನೆಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮಧ್ಯೆ ಮಧ್ಯೆ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದ ಸಂಜು ಸ್ಯಾಮ್ಸನ್, ಈ ಬಾರಿಯೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕೇರಳ ಮೂಲದ ಕ್ರಿಕೆಟಿಗರಾದ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕುರಿತು ಪ್ರಶ್ನೆಯನ್ನೆತ್ತಿದ್ದಾರೆ. ಅಲ್ಲದೆ, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ನಾಯಕರನ್ನಾಗಿಸಬೇಕಿತ್ತು ಎಂದೂ ಸಲಹೆ ನೀಡಿದ್ದಾರೆ. ಇದರೊಂದಿಗೆ ತಂಡದಿಂದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಕೈಬಿಟ್ಟಿರುವ ಕುರಿತೂ ಅವರು ಪ್ರಶ್ನೆಯೆತ್ತಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, “ಇದು ನಿಜವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲದ್ದು. ಸಂಜು ಸ್ಯಾಮ್ಸನ್ ಕೇವಲ ತಂಡಕ್ಕೆ ಆಯ್ಕೆ ಮಾತ್ರ ಆಗಬೇಕಿರಲಿಲ್ಲ; ಬದಲಿಗೆ ಅವರು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬೇಕಿತ್ತು. ಕೇರಳ ಮತ್ತು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅವರು ನೀಡಿರುವ ನಾಯಕತ್ವವು ಆ ತಂಡಗಳನ್ನು ಹಿಂದೆಂದಿಗಿಂತಲೂ ಎತ್ತರಕ್ಕೆ ಕೊಂಡೊಯ್ದಿವೆ. ನಮ್ಮ ಆಯ್ಕೆದಾರರು ಕ್ರಿಕೆಟ್ ಅನ್ನು ಪ್ರೀತಿಸುವ ಸಾರ್ವಜನಿಕರಿಗೆ ಈ ಕುರಿತು ಉತ್ತರಿಸಬೇಕಿದೆ. ಹಾಗೆಯೇ ಯಜುವೇಂದ್ರ ಚಾಹಲ್ ಅವರನ್ನೇಕೆ ಆಯ್ಕೆ ಮಾಡಿಲ್ಲ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿಯು ಗುರುವಾರದಿಂದ ಪ್ರಾರಂಭಗೊಳ್ಳುತ್ತಿದ್ದು, ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ ವಹಿಸಲಿದ್ದಾರೆ.