ಕುನಾಲ್ ಕಾಮ್ರಾ ಟಿಕೆಟ್ ಮಾರಾಟ ಮಾಡಬೇಡಿ: ʼಬುಕ್ಮೈಶೋʼಗೆ ಶಿವಸೇನೆ ನಾಯಕ ಎಚ್ಚರಿಕೆ
ಕುನಾಲ್ ಕಾಮ್ರಾ | PC : X
ಮುಂಬೈ: ಕಾಮಿಡಿಯನ್ ಕುನಾಲ್ ಕಾಮ್ರಾ ನಡೆಸಿಕೊಡುವ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಮಾಡದಂತೆ ಆನ್ಲೈನ್ ಟಿಕೆಟ್ ಮಾರಾಟ ವೇದಿಕೆ ‘ಬುಕ್ಮೈಶೋ’ಗೆ ಶಿವಸೇನೆ ಯುವ ಘಟಕದ ನಾಯಕ ರಾಹುಲ್ ಎನ್. ಕನಲ್ ಎಚ್ಚರಿಕೆ ನೀಡಿದ್ದಾರೆ. ಕಾಮ್ರಾ ಮುಂಬೈಗೆ ಬರುವಾಗಲೆಲ್ಲ ಅವರನ್ನು ‘‘ಶಿವಸೇನೆ ಮಾದರಿ’’ಯಲ್ಲಿ ಸ್ವಾಗತಿಸಲಾಗುವುದು ಎಂದು ಹೇಳಿದ ದಿನಗಳ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ.
‘‘ಓರ್ವ ಕಳವಳಗೊಂಡಿರುವ ನಾಗರಿಕನಾಗಿ ನನ್ನ ವೈಯಕ್ತಿಕ ನೆಲೆಯಲ್ಲಿ ನಾನು, ರಾಹುಲ್ ಎನ್. ಕನಲ್ ಈ ಪತ್ರವನ್ನು ಬರೆಯುತ್ತಿದ್ದೇನೆ. ಬುಕ್ಮೈಶೋನ ಕಾರ್ಯಾಚರಣೆಗೆ ಸಂಬಂಧಿಸಿದ ಮಹತ್ವದ ಸಾರ್ವಜನಿಕ ಹಿತಾಸಕ್ತಿಯ ವಿಷಯವೊಂದನ್ನು ನಾನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಕೆಟ್ಟದಾಗಿ ವರ್ತಿಸುವ ಚಾಳಿ ಹೊಂದಿರುವ ಕುನಾಲ್ ಕಾಮ್ರಾರ ಕಾರ್ಯಕ್ರಮಗಳ ಟಿಕೆಟ್ಗಳನ್ನು ಹಿಂದೆ ಬುಕ್ಮೈಶೋ ಮಾಡಿತ್ತು ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅವರ ಕಾರ್ಯಕ್ರಮಗಳ ಟಿಕೆಟ್ ಮಾರಾಟ ಮಾಡುವುದು ಅವರ ನಿಲುವುಗಳನ್ನು ಅನುಮೋದಿಸಿದಂತೆ ಆಗುತ್ತದೆ. ಇದು ಜನರ ಭಾವನೆಗಳ ಮೇಲೆ ಮತ್ತು ನಗರದ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದಾಗಿದೆ’’ ಎಂದು ರಾಹುಲ್ ಕನಾಲ್ ತನ್ನ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ ನೀಡಿದ ಕಾರ್ಯಕ್ರಮವೊಂದರಲ್ಲಿ, ಕುನಾಲ್ ಕಾಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆಯನ್ನು ‘‘ದ್ರೋಹಿ’’ ಎಂಬುದಾಗಿ ಕರೆದಿದ್ದಾರೆ ಎಂಬುದಾಗಿ ಶಿವಸೇನೆ ಕಾರ್ಯಕರ್ತರು ಆರೋಪಿಸಿ ಕಾರ್ಯಕ್ರಮ ನಡೆದ ಸ್ಥಳದಲ್ಲಿ ದಾಂಧಲೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.