ಮುಂಬೈ | ಶಿವಸೇನಾ ನಾಯಕನ ಅಪಹರಣ; ಪ್ರಕರಣ ದಾಖಲು

ಗೌರವ್ ಕೋಟ್ಗಿರೆ | PC : lokmat.com
ಮುಂಬೈ: ನಾಂದೇಡ್ ನಲ್ಲಿ ಶಿವಸೇನೆ(ಉದ್ಧವ್ ಬಣ) ನಾಯಕನೋರ್ವನನ್ನು ತಂಡವೊಂದು ಅಪಹರಿಸಿರುವ ಘಟನೆ ನಡೆದಿದ್ದು, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಾಂದೇಡ್ ವಿಭಾಗದ ಶಿವಸೇನಾ ಮುಖ್ಯಸ್ಥ ಗೌರವ್ ಕೋಟ್ಗಿರೆ ಅವರನ್ನು ಶುಕ್ರವಾರ ರಾತ್ರಿ ಎಂಟರಿಂದ ಒಂಬತ್ತು ಜನರಿದ್ದ ತಂಡ ಬಫ್ನಾ ಪ್ರದೇಶದಿಂದ ಅಪಹರಿಸಿದೆ.
ಗೌರವ್ ಕೋಟ್ಗಿರೆ ತನ್ನ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಎಸ್ ಯುವಿ ಕಾರಿನಲ್ಲಿ ಬಂದ ತಂಡ ಅವರನ್ನು ಅಪಹರಿಸಿತ್ತು. ಕೆಲವು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಪಹರಣ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಟ್ವಾರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.