ಚುನಾವಣಾ ಆಯೋಗದ ನೆರವಿನಿಂದ ಬಿಜೆಪಿ ಮತದಾರರ ಪಟ್ಟಿ ತಿರುಚುತ್ತಿದೆ: ಸಂಜಯ್ ರಾವತ್ ಆರೋಪ
ಸಂಜಯ್ ರಾವತ್ (PTI)
ಮಹಾರಾಷ್ಟ್ರ: ಚುನಾವಣಾ ಆಯೋಗದ ನೆರವಿನಿಂದ ಬಿಜೆಪಿ ಮತದಾರರ ಪಟ್ಟಿಯನ್ನು ತಿರುಚುತ್ತಿದೆ ಎಂದು ಶಿವಸೇನೆ(ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ನೆರವಿನಿಂದ ಬಿಜೆಪಿ ಮತದಾರರ ಪಟ್ಟಿಯನ್ನು ತಿರುಚುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸುಮಾರು 150 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಅವರು ಮೈತ್ರಿಕೂಟ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಮತ ಚಲಾಯಿಸಿದವರನ್ನು ಪತ್ತೆ ಹಚ್ಚುತ್ತಿದ್ದಾರೆ ಮತ್ತು ಅವರ ಹೆಸರಿನಲ್ಲಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದಾರೆ. ನಾವು ಈ ವಿಷಯವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೇವೆ ಮತ್ತು ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿವೆ, ಅವರು ಹರ್ಯಾಣದಲ್ಲಿ ಪ್ರಯತ್ನಿಸಿದ್ದರು. ನಾವು ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದೇವೆ. ವಿಧಾನಸಭಾ ಚುನಾವಣೆಯಲ್ಲೂ ಸೋಲುತ್ತಾರೆ. ಅವರು ಚುನಾವಣಾ ಆಯೋಗದ ಸಹಾಯದಿಂದ ಮತದಾರರ ಪಟ್ಟಿಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯ ನಂತರವೂ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ, ಆದರೆ ನಾವು ಬಿಡುವುದಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.