ಶಿವಾಜಿ ಪ್ರತಿಮೆ ಕುಸಿತ: ಕ್ಷಮೆಯಾಚಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ | PC: PTI
ಹೊಸದಿಲ್ಲಿ : ಮಹಾರಾಷ್ಟ್ರದ ಸಿಂಧುದುರ್ಗದ ರಾಜ್ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ನಲ್ಲಿ ವಧ್ವಾನ್ ಬಂದರು ಮತ್ತು ಇತರ ಯೋಜನೆಗಳಿಗೆ ಚಾಲನೆ ನೀಡಿ, ಜನಸಮೂಹವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು.
"ನನಗೆ, ನನ್ನ ಸಹೋದ್ಯೋಗಿಗಳಿಗೆ ಮತ್ತು ಎಲ್ಲರಿಗೂ, ಶಿವಾಜಿ ಮಹಾರಾಜರು ಕೇವಲ ರಾಜನಲ್ಲ. ಅವರೊಬ್ಬ ಗೌರವಾನ್ವಿತ ವ್ಯಕ್ತಿ. ನಾನು ತಲೆಬಾಗುತ್ತಾ ಕ್ಷಮೆಯಾಚಿಸುತ್ತೇನೆ" ಎಂದು ಅವರು ಹೇಳಿದರು.
“ಛತ್ರಪತಿ ಶಿವಾಜಿ ಮಹಾರಾಜರನ್ನು ಅವರ ಪೂಜ್ಯ ದೇವರೆಂದು ಪೂಜಿಸುವ ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ. ಅವರ ಭಾವನೆಗಳಿಗೆ ಧಕ್ಕೆಯಾಗಿದೆ. ನನ್ನ ‘ಸಂಸ್ಕಾರ’ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಮಗೆ, ನಮ್ಮ ಪೂಜ್ಯ ದೇವತೆಗಿಂತ ಯಾವುದೂ ದೊಡ್ಡದಲ್ಲ” ಎಂದು ಮೋದಿ ಹೇಳಿದರು.
ಕಳೆದ ವರ್ಷ ಡಿಸೆಂಬರ್ 4, ನೌಕಾಪಡೆಯ ದಿನದಂದು ಸಿಂಧುದುರ್ಗದ ಮಾಲ್ವಾನ್ ತೆಹಸಿಲ್ನಲ್ಲಿರುವ ರಾಜ್ಕೋಟ್ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಶಿವಾಜಿ ಮಹಾರರಾಜರ 35 ಅಡಿ ಪ್ರತಿಮೆ ಸೋಮವಾರ ಆಗಸ್ಟ್ 26, 2024 ರಂದು ಕುಸಿದಿತ್ತು.