ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕುರಿತ ಹೇಳಿಕೆ: ತಮಿಳುನಾಡು ಜನರ ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
ಚೆನ್ನೈ: ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟದ ಕುರಿತು ತಾವು ನೀಡಿದ್ದ ಹೇಳಿಕೆಯ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡು ಜನರ ಕ್ಷಮೆಯಾಚಿಸಿದ್ದು, ಈ ಸಂಬಂಧ ಮದ್ರಾಸ್ ಹೈಕೋರ್ಟ್ ಗೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿನ ಜನಪ್ರಿಯ ಉಪಾಹಾರ ಗೃಹವಾದ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಆಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಬಾಂಬ್ ಸ್ಫೋಟದೊಂದಿಗೆ ತಮಿಳುನಾಡನ್ನು ತಳುಕು ಹಾಕಿದ್ದರು. ಈ ಸಂಬಂಧ ಮದುರೈ ಪೊಲೀಸರು ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ, ಶೋಭಾ ಕರಂದ್ಲಾಜೆ ಅವರು, ತಮ್ಮ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕೈಬಿಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ, “ನಾನು ತಮಿಳುನಾಡು ಜನರ ಕುರಿತು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ” ಎಂದು ಹೇಳಿದ್ದಾರೆ.
ನಾನು ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈಗಾಗಲೇ ಕ್ಷಮಾಪಣೆ ಕೋರಿದ್ದೇನೆ ಎಂದೂ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.