ಬಾಬಾ ಸಿದ್ದೀಕಿಯನ್ನು ಗುರಿಯಾಗಿಸುವ ಮೊದಲೇ ಸಲ್ಮಾನ್ ಖಾನ್ ಹತ್ಯೆಗೆ ಯತ್ನಿಸಿದ್ದ ಶೂಟರ್ ಗಳು: ವರದಿ
ಸಲ್ಮಾನ್ ಖಾನ್, ಬಾಬಾ ಸಿದ್ದೀಕಿ | PC : X
ಹೊಸದಿಲ್ಲಿ: ಬಾಬಾ ಸಿದ್ದೀಕಿ ಹತ್ಯೆ ಆರೋಪಿಗಳು ಎನ್ಸಿಪಿ ನಾಯಕನನ್ನು ಗುರಿಯಾಗಿಸುವ ಮೊದಲು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು India Today ವರದಿ ಮಾಡಿದೆ.
ಸಲ್ಮಾನ್ ಖಾನ್ ನಮ್ಮ ಹಿಟ್ ಲಿಸ್ಟ್ ನಲ್ಲಿದ್ದ, ಆದರೆ ಬಿಗಿಯಾದ ಭದ್ರತಾ ವ್ಯವಸ್ಥೆಗಳಿಂದ ಅವರನ್ನು ಗುರಿಯಾಗಿಸುವುದು ಕಷ್ಟವಾಗಿತ್ತು ಎಂದು ಶೂಟರ್ ಗಳಲ್ಲಿ ಓರ್ವ ವಿಚಾರಣೆ ವೇಳೆ ತಿಳಿಸಿರುವುದು ಬಹಿರಂಗವಾಗಿದೆ.
ಬಾಬಾ ಸಿದ್ದೀಕಿ ಅವರನ್ನು ಅ.12ರಂದು ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಜೀಶನ್ ಸಿದ್ದೀಕಿ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಾಬಾ ಸಿದ್ದೀಕಿ ಹತ್ಯೆ ಆರೋಪಿಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿದ್ದರು. ಬಿಷ್ಣೋಯ್ ಸಮುದಾಯಕ್ಕೆ ಪವಿತ್ರ ಪ್ರಾಣಿಯಾದ ಕೃಷ್ಣಮೃಗವನ್ನು ಬೇಟೆಯಾಡಿದ ನಂತರ ನಟ ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು.
2024ರ ಎಪ್ರಿಲ್ 14ರಂದು ಬೈಕ್ ನಲ್ಲಿ ಬಂದ ಇಬ್ಬರು ಬಂದೂಕುಧಾರಿಗಳು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ತಡರಾತ್ರಿ ಗುಂಡಿನ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಬಂಧಿತ ಶೂಟರ್ ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದರು.
ನವೆಂಬರ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಸಲ್ಮಾನ್ ಖಾನ್ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ಪಾವತಿಸಬೇಕು ಎಂದು ಬೆದರಿಕೆ ಹಾಕಿದ್ದರು.