ದೇಶವು 22 ಲಕ್ಷ ನುರಿತ ಚಾಲಕರ ಕೊರತೆಯನ್ನು ಎದುರಿಸುತ್ತಿದೆ: ನಿತಿನ್ ಗಡ್ಕರಿ
ಸೂಕ್ತ ತರಬೇತಿ ಸೌಲಭ್ಯಗಳ ಕೊರತೆಯಿಂದ ಅಪಘಾತಗಳು ಸಂಭವಿಸುತ್ತಿವೆ ಎಂದ ಕೇಂದ್ರ ಸಚಿವ

Photo PTI
ಹೊಸದಿಲ್ಲಿ: ದೇಶವು 22 ಲಕ್ಷ ನುರಿತ ಚಾಲಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಗುರುವಾರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದರು. ಚಾಲಕರಿಗೆ ಸೂಕ್ತ ತರಬೇತಿ ಸೌಲಭ್ಯದ ಕೊರತೆ ಇರುವುದರಿಂದ, ಅವರು ಅಪಘಾತವೆಸಗಲು ಕಾರಣವಾಗುತ್ತಿದೆ ಎಂದೂ ಅವರು ಹೇಳಿದರು.
ಲೋಕಸಭೆಯಲ್ಲಿನ ಪ್ರಶ್ನೋತ್ತರ ಕಲಾಪವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ಚಾಲಕರಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ 4,500 ಕೋಟಿ ರೂ. ಯೋಜನೆಗೆ ಚಾಲನೆ ನೀಡಿದೆ ಎಂದು ತಿಳಿಸಿದರು.
ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ 22 ಲಕ್ಷ ನುರಿತ ಚಾಲಕರ ಕೊರತೆ ಇದೆ ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದರು.
ದೇಶದಲ್ಲಿ ಸೂಕ್ತ ತರಬೇತಿ ಸೌಲಭ್ಯಗಳ ಕೊರತೆ ಇರುವುದರಿಂದ, ಹಲವಾರು ಅಪಘಾತ ಮತ್ತು ಸಾವುಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದರು.
ದೇಶಾದ್ಯಂತ ಇರುವ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತಹಂತವಾಗಿ 1,600 ಚಾಲನಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.
ಈ ತರಬೇತಿ ಸಂಸ್ಥೆಗಳ ಸ್ಥಾಪನೆಯಿಂದ 60 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಗಡ್ಕರಿ ಪ್ರತಿಪಾದಿಸಿದರು.
ಚಾಲನಾ ತರಬೇತಿ ಮತ್ತು ತರಬೇತಿ ಸಂಸ್ಥೆಗಳು, ಪ್ರಾಂತೀಯ ಚಾಲನಾ ತರಬೇತಿ ಕೇಂದ್ರಗಳು ಹಾಗೂ ಚಾಲನಾ ತರಬೇತಿ ಕೇಂದ್ರಗಳನ್ನು ಕ್ಲಸ್ಟರ್ ಸ್ವರೂಪದಲ್ಲಿ ಸ್ಥಾಪಿಸಲು ಸೂಕ್ತ ಪ್ರಸ್ತಾವನೆಗಳನ್ನು ಕಳಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು.
ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಸುಮಾರು 1.8 ಲಕ್ಷ ಮಂದಿ ಮೃತಪಡುತ್ತಿದ್ದು, ಇದಕ್ಕೆ ಸೂಕ್ತ ತರಬೇತಿ ಹೊಂದಿರದ ಚಾಲಕರು ಕಾರಣ ಎಂದೂ ಅವರು ಹೇಳಿದರು.