ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ಏಮ್ಸ್ನಲ್ಲಿ ಬೋಧಕ ಸಿಬ್ಬಂದಿ ಕೊರತೆ
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ. | Photo : PTI
ಹೊಸದಿಲ್ಲಿ: ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಎನಿಸಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಇದೀಗ ಬೋಧಕ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಂಸ್ಥೆಯಲ್ಲಿ 347 ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇದ್ದು, ಮಂಜೂರಾದ ಹುದ್ದೆಗಳ ಪೈಕಿ ಶೇಕಡ 28 ರಷ್ಟು ಹುದ್ದೆಗಳು ಭರ್ತಿಯಾಗದೇ ಉಳಿದಿವೆ.
ದೇಶಾದ್ಯಂತ 20 ಹಳೆಯ ಹಾಗೂ ಹೊಸ ಎಐಐಎಂಸ್ಗಳಲ್ಲೂ ಇದೇ ಪರಿಸ್ಥಿತಿ ಇದೆ. ದೇಶದ ಒಟ್ಟು 20 ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಶೇಕಡ 40ರಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದೆ ಜ್ಯೋತ್ಸ್ನಾ ಚರಣ್ದಾಸ್ ಮಹಾಂತ ಅವರಿಗೆ ನೀಡಿದ ಉತ್ತರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅಂಕಿ ಅಂಶಗಳ ಪ್ರಕಾರ ಎಐಐಎಂಎಸ್ಗಳಲ್ಲಿ ಒಟ್ಟು 5527 ಮಂಜೂರಾದ ಬೋಧಕ ಹುದ್ದೆಗಳಿದ್ದು, ಈ ಪೈಕಿ 2161 ಹುದ್ದೆಗಳು ಖಾಲಿ ಇವೆ. ನವದೆಹಲಿಯ ಎಐಐಎಂಎಸ್ನಲ್ಲಿ ಖಾಲಿ ಹುದ್ದೆಗಳು ಅತ್ಯಧಿಕ.
ಈ ವರ್ಷದ ಏಪ್ರಿಲ್ನಲ್ಲಿ ಹೊಸದಿಲ್ಲಿ ಏಮ್ಸ್ ನಿರ್ದೇಶಕ ಎಂ.ಶ್ರೀನಿವಾಸ್ ಅವರು ಖಾಲಿ ಹುದ್ದೆಗಳ ಭರ್ತಿಗಾಗಿ 'ಮಿಷನ್ ರಿಕ್ರೂಟ್ಮೆಂಟ್' ಅಭಿಯಾನ ಆರಂಭಿಸಿದ್ದರು. ಸೆಪ್ಟೆಂಬರ್ ವೇಳೆಗೆ ಖಾಲಿ ಹುದ್ದೆಗಳನ್ನು ಶೂನ್ಯಕ್ಕೆ ತರುವ ಉದ್ದೇಶವಿದೆ ಎಂದು ಹೇಳಿದ್ದರು. ಈ ಅಭಿಯಾನದಡಿ ಎಷ್ಟು ಹುದ್ದೆಗಳು ಭರ್ತಿಯಾಗಿವೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.