"ಪ್ರತಿಭಟನಾ ನಿರತರನ್ನು ಭೇಟಿ ಮಾಡಬೇಕಿತ್ತು": ಪ್ರಧಾನಿ ಮೋದಿ ಭೇಟಿಯಾದ ದಿಲ್ಜಿತ್ ದೋಸಾಂಜ್ ಗೆ ರೈತ ಮುಖಂಡರ ತರಾಟೆ
ಗಾಯಕ, ನಟ ದಿಲ್ಜಿತ್ ದೋಸಾಂಜ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಕ್ಕೆ ಪಂಜಾಬಿ ಗಾಯಕ, ನಟ ದಿಲ್ಜಿತ್ ದೋಸಾಂಜ್ ಗೆ ರೈತ ಮುಖಂಡರು ಟೀಕಿಸಿದ್ದು, ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದಲ್ಲೆವಾಲ್ ಗೆ ಬೆಂಬಲ ಸೂಚಿಸುತ್ತಿದ್ದರು ಎಂದು ಹೇಳಿದ್ದಾರೆ.
2020ರಲ್ಲಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ದಿಲ್ಜಿತ್ ದೋಸಾಂಜ್ ಬೆಂಬಲವನ್ನು ವ್ಯಕ್ತಪಡಿಸಿದ್ದರು. ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಮೂಲಕ ದಿಲ್ಜಿತ್ ದೋಸಾಂಜ್ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಜೆಪಿ, ಬಲಪಂಥಿಯರ ಟೀಕೆಗೆ ಗುರಿಯಾಗಿದ್ದ ಗಾಯಕ ದಿಲ್ಜಿತ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.
ಶಂಭು ಗಡಿಯಲ್ಲಿ ರೈತ ಮುಖಂಡರೊಬ್ಬರು ಮಾತನಾಡುತ್ತಾ, ದಿಲ್ಜಿತ್ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವರು ಶಂಭು ಗಡಿಗೆ ಬಂದು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದಲ್ಲೆವಾಲ್ ಅವರಿಗೆ ಬೆಂಬಲ ಸೂಚಿಸುತ್ತಿದ್ದರು. ನಮ್ಮ ಸಮಸ್ಯೆಗಳನ್ನು ಆಲಿಸುತ್ತಿದ್ದರು ಮತ್ತು ಹಿಂದಿನ ಹೇಳಿಕೆಗಳಿಗೆ ಬದ್ಧವಾಗಿರುತ್ತಿದ್ದರು. ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದರಿಂದ ಅವರ ಉದ್ದೇಶಗಳ ಬಗ್ಗೆ ಅನುಮಾನವಿದೆ ಎಂದು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ), ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡ ಜಗಜಿತ್ ದಲ್ಲೆವಾಲ್ ಅವರು 38 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರನ್ನು ಬೆಂಬಲಿಸಲು ಸಾವಿರಾರು ರೈತರು, ನೂರಾರು ಟ್ರ್ಯಾಕ್ಟರ್-ಟ್ರಾಲಿಗಳೊಂದಿಗೆ ಖಾನೌರಿಯಲ್ಲಿ ಜಮಾಯಿಸಿದ್ದಾರೆ.
ದಿಲ್ಜಿತ್ ದೋಸಾಂಜ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.