ಸೆಮಿ ಫೈನಲ್ ನಲ್ಲಿ ಮುಂಬೈ ಪರ ಆಡಲು ಶ್ರೇಯಸ್ ಅಯ್ಯರ್ ಸಜ್ಜು
ಶ್ರೇಯಸ್ ಅಯ್ಯರ್ | Photo: X
ಮುಂಬೈ: ಬೆನ್ನು ನೋವಿನಿಂದಾಗಿ ಸ್ಫರ್ಧಾತ್ಮಕ ಕ್ರಿಕೆಟ್ ನಿಂದ ದೂರ ಉಳಿದಿರುವ ಭಾರತದ ಮಧ್ಯಮ ಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು ತಮಿಳುನಾಡು ವಿರುದ್ಧ ಮಾರ್ಚ್ 2ರಿಂದ ಮುಂಬೈನಲ್ಲಿ ನಡೆಯಲಿರುವ ರಣಜಿ ಟ್ರೋಫಿ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಲಭ್ಯವಿರಲಿದ್ದಾರೆ. ಅಯ್ಯರ್ ಆಗಮನದಿಂದಾಗಿ ಮುಂಬೈ ಬ್ಯಾಟಿಂಗ್ ಸರದಿಗೆ ಮತ್ತಷ್ಟು ಬಲಬಂದಿದೆ.
ನಾನೀಗ ಫಿಟ್ ಆಗಿದ್ದು ಮುಂಬೈ ಕ್ರಿಕೆಟ್ ತಂಡ ಆಡಲಿರುವ ರಣಜಿ ಸೆಮಿ ಫೈನಲ್ ಪಂದ್ಯಕ್ಕೆ ಲಭ್ಯವಿರುವುದಾಗಿ ಅಯ್ಯರ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯ್ಯರ್ ಬ್ಯಾಟಿಂಗ್ ನ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿದ್ದು ಮುಂಬೈನ ಕೊನೆಯ ಎರಡು ಪಂದ್ಯಗಳಿಂದ ವಂಚಿತರಾಗಿದ್ದರು. ಇಂಗ್ಲೆಂಡ್ ವಿರುದ್ಧ ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ನಡೆದಿರುವ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅಯ್ಯರ್ 35, 13, 27 ಹಾಗೂ 29 ರನ್ ಗಳಿಸಿದ್ದರು.
ವಾಶಿಂಗ್ಟನ್ ಸುಂದರ್, ಸಾಯಿ ಸುದರ್ಶನ್ ತಮಿಳುನಾಡು ತಂಡಕ್ಕೆ ಲಭ್ಯ
ಇದೇ ವೇಳೆ ಭಾರತದ ಆಫ್ ಸ್ಪಿನ್ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಮುಂಬೈ ವಿರುದ್ಧ ರಣಜಿ ಟ್ರೋಫಿ ಸೆಮಿ ಫೈನಲ್ ನಲ್ಲಿ ತಮಿಳುನಾಡು ತಂಡಕ್ಕೆ ವಾಪಸಾಗಿದ್ದಾರೆ. ಈ ಇಬ್ಬರ ಲಭ್ಯತೆಯು ತಮಿಳುನಾಡಿಗೆ ಹೊಸ ಹುಮ್ಮಸ್ಸು ನೀಡಿದೆ. ಸುಂದರ್ ಭಾರತ ತಂಡದಿಂದ ವಾಪಸಾಗಿದ್ದರೆ, ಸುದರ್ಶನ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದಾರೆ.
ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಸುಂದರ್ರನ್ನು ಬಿಡುಗಡೆ ಮಾಡಲು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.
ಬೆನ್ನುನೋವಿನಿಂದ ಬಳಲುತ್ತಿರುವ ಸುದರ್ಶನ್ ಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಕ್ರಿಕೆಟಿಗೆ ಮರಳಲು ಹಸಿರು ನಿಶಾನೆ ತೋರಿದೆ.