ರೋಹಿತ್, ಕೊಹ್ಲಿ ನಿವೃತ್ತಿ ಕುರಿತು ಚರ್ಚೆ ಆಗಿಲ್ಲ ; ಫೈನಲ್ ಪಂದ್ಯ ಗೆಲ್ಲುವತ್ತ ತಂಡದ ಚಿತ್ತ: ಶುಭಮನ್ ಗಿಲ್

ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ,
ದುಬೈ: ದುಬೈನಲ್ಲಿ ರವಿವಾರ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲು ಭಾರತ ತಯಾರಾಗಿರುವಂತೆಯೇ ‘‘ಮೈದಾನದ ಹೊರಗಿನ ವಿಷಯಗಳಿಂದ ಆಟಗಾರರು ವಿಚಲಿತರಾಗುವುದಿಲ್ಲ. ಡ್ರೆಸ್ಸಿಂಗ್ ರೂಮ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿ ಕುರಿತು ಚರ್ಚೆ ನಡೆಯುತ್ತಿಲ್ಲ, ಅದರ ಬದಲಿಗೆ, ಪ್ರಶಸ್ತಿಯನ್ನು ಗೆಲ್ಲುವತ್ತ ತಂಡವು ಸಂಪೂರ್ಣ ಗಮನ ಹರಿಸಿದೆ’’ಎಂದು ತಂಡದ ಉಪ ನಾಯಕ ಶುಭಮನ್ ಗಿಲ್ ಶನಿವಾರ ಹೇಳಿದ್ದಾರೆ.
ಫೈನಲ್ ಪಂದ್ಯದ ಮುನ್ನಾ ದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಎರಡನೇ ಐಸಿಸಿ ಪಂದ್ಯಾವಳಿಯ ಫೈನಲ್ನಲ್ಲಿ ಆಡುತ್ತಿರುವುದಕ್ಕೆ ರೋಮಾಂಚನವಾಗುತ್ತಿದೆ. 2023ರ ಏಕದಿನ ವಿಶ್ವಕಪ್ನಲ್ಲಿನ ತನ್ನ ಸಾಧನೆಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ತಂಡವು ಕಟಿಬದ್ಧವಾಗಿದೆ ಎಂದು ನುಡಿದರು. ಆ ಫೈನಲ್ನಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ ಸೋತಿತ್ತು.
‘‘ನನ್ನ ಎರಡನೇ ಐಸಿಸಿ ಫೈನಲ್ನಲ್ಲಿ ಆಡುತ್ತಿರುವುದಕ್ಕೆ ರೋಮಾಂಚನವಾಗುತ್ತಿದೆ. ಕಳೆದ ಬಾರಿ (2023ರ ವಿಶ್ವಕಪ್ನಲ್ಲಿ) ಮಾಡಲು ಸಾಧ್ಯವಾಗದ್ದನ್ನು ಈ ಬಾರಿ ಮಾಡಲು ಪ್ರಯತ್ನಿಸುತ್ತೇವೆ’’ ಎಂದು ಗಿಲ್ ಹೇಳಿದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯುದ್ದಕ್ಕೂ ಬ್ಯಾಟಿಂಗ್ ಭಾರತದ ಪ್ರಬಲ ಶಕ್ತಿಯಾಗಿದೆ. ಎಲ್ಲಾ ಪ್ರಮುಖ ಆಟಗಾರರು ಬ್ಯಾಟ್ನಲ್ಲಿ ದೇಣಿಗೆ ನೀಡಿದ್ದಾರೆ. ಈಗಿನ ಬ್ಯಾಟಿಂಗ್ ಘಟಕವು ಈವರೆಗಿನ ನಾನು ಭಾಗಿಯಾಗಿರುವ ತಂಡಗಳಲ್ಲೇ ಶ್ರೇಷ್ಠವಾಗಿದೆ ಎಂಬುದಾಗಿ ಗಿಲ್ ಹೊಗಳಿದರು.
‘‘ಇದು ಈವರೆಗೆ ನಾನು ಭಾಗಿಯಾಗಿರುವ ತಂಡಗಳಲ್ಲೇ ಶ್ರೇಷ್ಠ ಬ್ಯಾಟಿಂಗ್ ಸರದಿಯಾಗಿದೆ. ನಮ್ಮಲ್ಲಿ ಸಾರ್ವಕಾಲಿಕ ಶ್ರೇಷ್ಠರಾದ ವಿರಾಟ್ (ಕೊಹ್ಲಿ) ಭಾಯಿ ಮತ್ತು ರೋಹಿತ್ (ಶರ್ಮಾ) ಭಾಯಿ ಇದ್ದಾರೆ. ರೋಹಿತ್ ಭಾಯಿ ಶ್ರೇಷ್ಠ ಆರಂಭಿಕರ ಪೈಕಿ ಒಬ್ಬರು, ವಿರಾಟ್ ಭಾಯಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರು. ನಮ್ಮ ಬ್ಯಾಟಿಂಗ್ನಲ್ಲಿ ಆಳವಿದೆ. ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್- ಎಲ್ಲರೂ ಉತ್ತಮ ಕೊಡುಗೆ ನೀಡಿದ್ದಾರೆ’’ ಎಂದು ಗಿಲ್ ನುಡಿದರು.