ಪಹಲ್ಗಾಮ್ ಭಯೋತ್ಪಾದಕ ದಾಳಿ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಪ್ರಧಾನಿಗೆ ಸಿಬಲ್ ಆಗ್ರಹ

ಕಪಿಲ್ ಸಿಬಲ್ |PTI
ಹೊಸದಿಲ್ಲಿ: ಭಯೋತ್ಪಾದಕ ಭಯೋತ್ಪಾದಕನೇ ಮತ್ತು ಭಯೋತ್ಪಾದಕರಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶುಕ್ರವಾರ ಇಲ್ಲಿ ಹೇಳಿದ ಹಿರಿಯ ನ್ಯಾಯವಾದಿ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಲ್, ‘ಪ್ರಧಾನಿಯವರಿಗೆ ಕೆಲವು ಸಲಹೆಗಳನ್ನು ನೀಡಲು ನಾನು ಬಯಸುತ್ತೇನೆ. ಮೊದಲನೆಯದಾಗಿ ಇಡೀ ದೇಶವು ನಿಮ್ಮೊಂದಿಗೆ ನಿಂತಿದೆ. ನೀವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ಚರ್ಚಿಸಬೇಕು ಮತ್ತು ಪ್ರತಿಯೊಬ್ಬರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ನಿಮ್ಮೊಂದಿಗೆ ನಿಲ್ಲದ ಒಬ್ಬನೇ ಒಬ್ಬ ಪ್ರತಿಪಕ್ಷ ನಾಯಕನಿಲ್ಲ, ಏಕೆಂದರೆ ಇದು ಭಾರತದ ಸಾರ್ವಭೌಮತೆಯ ಮೇಲಿನ ದಾಳಿಯಾಗಿದೆ. ಅಮಾಯಕ ಪ್ರವಾಸಿಗಳ ಮೇಲೆ ಗುಂಡು ಹಾರಿಸುವುದು ಮಾನವೀಯ ಕೃತ್ಯವಲ್ಲ’, ಎಂದು ಹೇಳಿದರು.
ಭಯೋತ್ಪಾದನೆಯ ಮೂಲಕ ತನ್ನ ಸಮಸ್ಯೆಗಳನ್ನು ವಿಶ್ವದ ಮುಂದೆ ತರಲು ಪಾಕಿಸ್ತಾನವು ಬಯಸಿದೆ ಎಂದು ಹೇಳಿದ ಸಿಬಲ್, ಪ್ರತಿಯೊಬ್ಬರೂ ಸರಕಾರದ ಜೊತೆಯಲ್ಲಿದ್ದಾರೆ, ದೇಶವು ಒಗ್ಗಟ್ಟಾಗಿದೆ ಮತ್ತು ಭಾರತವು ಇದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ರವಾನಿಸುವ ಸರ್ವಾನುಮತದ ನಿರ್ಣಯವನ್ನು ಸಂಸತ್ತಿನಲ್ಲಿ ಅಂಗೀಕರಿಸಬೇಕು ಎಂದು ಒತ್ತಿ ಹೇಳಿದರು.
ನಿರ್ಣಯ ಅಂಗೀಕಾರದ ಬಳಿಕ ಸರಕಾರವು ಅಮೆರಿಕ, ಯುರೋಪ್, ಚೀನಾ, ರಶ್ಯಾ, ಜಪಾನ್ನಂತಹ ಪ್ರಮುಖ ದೇಶಗಳಿಗೆ ನಿಯೋಗಗಳನ್ನು ಕಳುಹಿಸಬೇಕು ಮತ್ತು ಈ ನಿಯೋಗಗಳಲ್ಲಿ ಸರ್ವಪಕ್ಷಗಳ ಸಂಸದರು ಒಳಗೊಂಡಿರಬೇಕು ಎಂದರು.
‘ನೀವು ಈ ರಾಜತಾಂತ್ರಿಕ ಉಪಕ್ರಮಗಳನ್ನು ತೆಗೆದುಕೊಳ್ಳುವವರೆಗೆ ಅಗತ್ಯವಿರುವ ಅಂತರರಾಷ್ಟ್ರೀಯ ಒತ್ತಡವನ್ನು ಸೃಷ್ಟಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನಾವು ಆಂತರಿಕವಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಂಡರೆ ಅದು ಪ್ರತ್ಯೇಕ ವಿಷಯ, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ಹೇರಬೇಕು ’ಎಂದರು.
ಅಮೆರಿಕ ಇತರ ದೇಶಗಳೊಂದಿಗೆ ಮಾಡುತ್ತಿರುವುದನ್ನು ನೀವೂ ಮಾಡಿ. ನೀವು ಪಾಕಿಸ್ತಾನದೊಂದಿಗೆ ವ್ಯಾಪಾರ ಮಾಡಿದರೆ ಭಾರತೀಯ ಮಾರುಕಟ್ಟೆಗೆ ನಿಮಗೆ ಪ್ರವೇಶವಿಲ್ಲ ಎಂದು ಭಾರತವು ಎಲ್ಲ ಪ್ರಮುಖ ದೇಶಗಳಿಗೆ ತಿಳಿಸಬೇಕು. ಇದರಿಂದ ನಮಗೆ ಸ್ಪಲ್ಪ ನಷ್ಟವಾಗಬಹುದು,ಆದರೆ ಅದು ಸ್ವೀಕಾರಾರ್ಹ. ಪ್ರತಿಯೊಂದು ರಾಜತಾಂತ್ರಿಕ ಉಪಕ್ರಮದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಬೇಕು ಎಂದ ಸಿಬಲ್,ವಿಶ್ವಸಂಸ್ಥೆಯ ಮೂಲಕವೂ ಒತ್ತಡವನ್ನು ಹೇರಬೇಕು ಮತ್ತು ನಿರ್ಣಯವೊಂದನ್ನು ಭದ್ರತಾ ಮಂಡಳಿಗೆ ಸಲ್ಲಿಸಬೇಕು. ಚೀನಾ ಅದನ್ನು ಬೆಂಬಲಿಸುವುದೇ ಅಥವಾ ವಿರೋಧಿಸುವುದೇ, ಅದು ಭಾರತದೊಂದಿಗೆ ನಿಲ್ಲುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ನೋಡೋಣ ಎಂದು ಹೇಳಿದರು.