ಸಿಕ್ಕಿಂ ಪ್ರವಾಹ: ಓರ್ವ ಯೋಧ ಪತ್ತೆ
Photo: PTI
ಗ್ಯಾಂಗ್ಟಕ್ : ಮೇಘಸ್ಫೋಟದಿಂದ ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ದಿಡೀರ್ ಪ್ರವಾಹದಲ್ಲಿ ನಾಪತ್ತೆಯಾದ 23 ಯೋಧರಲ್ಲಿ ಓರ್ವರನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ.
‘‘ಅವರ ಸ್ಥಿತಿ ಸ್ಥಿರವಾಗಿದೆ. ಅವರು ವೈದ್ಯಕೀಯ ನಿಗಾದಲ್ಲಿ ಇದ್ದಾರೆ’’ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ರಾವತ್ ಅವರು ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಯೋಧನನ್ನು ಬದ್ರಾಂಗ್ ನಿಂದ 18 ಕಿ.ಮೀ. ದೂರದಲ್ಲಿರುವ ದನಾಗ್ ಗ್ರಾಮದಿಂದ ರಕ್ಷಿಸಲಾಗಿದೆ. ಉಳಿದ ಯೋಧರನ್ನು ಪತ್ತೆ ಹಚ್ಚಲು ಹಾಗೂ ರಕ್ಷಿಸಲು ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘‘ನಿರಂತರ ಸುರಿಯುತ್ತಿರುವ ಮಳೆಯ ನಡುವೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತೀಸ್ತಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ರಸ್ತೆ ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ’’ ಎಂದು ಹೇಳಿಕೆ ತಿಳಿಸಿದೆ.
ಸಿಕ್ಕಿಂ ಹಾಗೂ ಉತ್ತರ ಬಂಗಾಳದಲ್ಲಿ ನಿಯೋಜಿರಾದ ಇತರ ಎಲ್ಲಾ ಸೇನಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಆದರೆ, ಮೊಬೈಲ್ ಸಂವಹನದಲ್ಲಿ ತೊಂದರೆ ಇರುವುದರಿಂದ ಅವರಿಗೆ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಲ್ಹೊನಾಕ್ ಸರೋವರದ ಮೇಲೆ ಮೇಘ ಸ್ಫೋಟ ಸಂಭವಿಸಿ ದಿಡೀರ್ ಪ್ರವಾಹ ಉಂಟಾದ ಬಳಿಕ 22 ಯೋಧರರಲ್ಲದೆ, 47 ನಾಗರಿಕರು ಕೂಡ ನಾಪತ್ತೆಯಾಗಿದ್ದಾರೆ.
ಮೇಘ ಸ್ಫೋಟದಿಂದ ಸಂಭವಿಸಿದ ಪ್ರವಾಹದಿಂದ 5,000ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.