ಏಕಕಾಲಿಕ ಚುನಾವಣೆಗಳು | ಲೋಕಸಭಾ ಚುನಾವಣಾ ದಿನಾಂಕ ಪ್ರಕಟಣೆಗೆ ಮುನ್ನವೇ ವರದಿ ಸಲ್ಲಿಕೆ
ಚುನಾವಣಾ ಆಯೋಗ | Photo: PTI
ಹೊಸದಿಲ್ಲಿ : ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆ ಕುರಿತು ತನ್ನ ಅಂತಿಮ ವರದಿಯನ್ನು 22ನೇ ಕಾನೂನು ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಣೆಗೆ ಮುನ್ನವೇ ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಚುನಾವಣಾ ಆಯೋಗವು ಮಾರ್ಚ್ ಮಧ್ಯದ ವೇಳೆಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ನ್ಯಾ.ರಿತುರಾಜ್ ಅವಸ್ಥಿ ನೇತೃತ್ವದ 22ನೇ ಕಾನೂನು ಆಯೋಗವು 2029ರ ವೇಳೆಗೆ ಏಕಕಾಲಿಕ ಚುನಾವಣೆಗಳ ಸಂಪೂರ್ಣ ಅನುಷ್ಠಾನವನ್ನು ಸುಗಮಗೊಳಿಸಲು ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಗಳ ಜೊತೆಗೆ ಏಕಕಾಲಿಕ ಚುನಾವಣೆಗಳು ಮತ್ತು ಸಾಮಾನ್ಯ ಮತದಾರರ ಪಟ್ಟಿ ರಚನೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಹೊಸ ಅಧ್ಯಾಯದ ಸೇರ್ಪಡೆಯನ್ನು ಆಯೋಗವು ಸೂಚಿಸಬಹುದು.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಹೆಚ್ಚಿನ ಸಲಹೆಗಳನ್ನು ಅನುಮೋದಿಸಿದೆ ಮತ್ತು ದೇಶಾದ್ಯಂತ ಏಕಕಾಲಿಕ ಚುನಾವಣೆಗಳನ್ನು ನಡೆಸುವ ಬಗ್ಗೆ ಒಲವನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಅವಿಶ್ವಾಸ ಮತದಿಂದಾಗಿ ಸರಕಾರವು ಪತನಗೊಂಡರೆ ಅಥವಾ ತ್ರಿಶಂಕು ಸದನವು ಏರ್ಪಟ್ಟರೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ‘ಏಕತಾ’ ಸರಕಾರ ರಚನೆಯ ಸಾಧ್ಯತೆಯನ್ನು ಅನ್ವೇಷಿಸಬಹುದು ಎಂದು ಆಯೋಗವು ಸೂಚಿಸಬಹುದು. ಏಕತಾ ಸರಕಾರ ರಚನೆಯ ಸೂತ್ರವು ವಿಫಲಗೊಂಡ ಪಕ್ಷದಲ್ಲಿ ಸದನದ ಉಳಿದ ಅವಧಿಗೆ ಹೊಸದಾಗಿ ಚುನಾವಣೆಗಳನ್ನು ನಡೆಸುವುದನ್ನು ಆಯೋಗವು ಸೂಚಿಸಬಹುದು.
ಆಯೋಗದ ಶಿಫಾರಸುಗಳು 21ನೇ ಕಾನೂನು ಆಯೋಗದ ವರದಿಗೆ ಅನುಗುಣವಾಗಿವೆ. ಏಕಕಾಲಿಕ ಚುನಾವಣೆಗಳು ಸಾರ್ವಜನಿಕ ಹಣವನ್ನು ಉಳಿಸುತ್ತವೆ, ಆದರೆ ಸಂವಿಧಾನದ ಹಾಲಿ ಚೌಕಟ್ಟಿನಲ್ಲಿ ಅವುಗಳನ್ನು ನಡೆಸುವುದು ಸಾಧ್ಯವಿಲ್ಲ ಎಂದು 21ನೇ ಆಯೋಗವು ಹೇಳಿತ್ತು.