2014ರಿಂದ ಚರಂಡಿ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 453 ಮಂದಿ ಸಾವು : ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶದ 766 ಜಿಲ್ಲೆಗಳ ಪೈಕಿ 732 ಜಿಲ್ಲೆಗಳು ಮಾನವ ಮಲ ಹೊರುವಿಕೆಯಿಂದ ಮುಕ್ತವಾಗಿವೆ ಎಂದು ಘೋಷಿಸಿಕೊಂಡ ಹೊರತಾಗಿಯೂ 2014ರಿಂದ ಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭ ಸುಮಾರು 453 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಮಂಗಳವಾರ ತಿಳಿಸಿದೆ.
ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠಾವಲೆ ಅವರು ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯಲ್ಲಿ ಈ ಬಗ್ಗೆ ಗಮನ ಸೆಳೆದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 2014ರಿಂದ ಚರಂಡಿ ಹಾಗೂ ಮಲಗುಂಡಿಗಳನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭ 453 ಮಂದಿ ಮೃತಪಟ್ಟಿದ್ದಾರೆ ಎಂದರು.
31.07.2024ಕ್ಕೆ ದೇಶದ 766 ಜಿಲ್ಲೆಗಳ ಪೈಕಿ 732 ಜಿಲ್ಲೆಗಳು ಮಲ ಹೊರುವಿಕೆ ಮುಕ್ತ ಎಂದು ಘೋಷಿಸಿಕೊಂಡಿವೆ ಎಂದು ಅಠಾವಳೆ ಹೇಳಿದರು.
ಮಾನವ ಮಲ ಹೊರುವಿಕೆ ನಿರ್ಮೂಲನಕ್ಕೆ ಬೆಂಬಲವಾಗಿ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕೇಂದ್ರ ಸರಕಾರ 371 ಕೋಟಿ ರೂ. ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.
ಈ ನಿಧಿಗಳನ್ನು ಸಣ್ಣ ಪಟ್ಟಣಗಳಲ್ಲಿ ಸುಧಾರಿತ ಯಂತ್ರೋಪಕರಣಗಳನ್ನು ಖರೀದಿಸಲು ಹಾಗೂ ಯಾಂತ್ರೀಕರಣದ ಮಟ್ಟವನ್ನು ಸುಧಾರಿಸಲು, ನೈರ್ಮಲ್ಯ ಕಾರ್ಯಗಳಲ್ಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಸುರಕ್ಷಿತ ಕೆಲಸದ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುವುದು ಎಂದು ಅಠಾವಳೆ ಹೇಳಿದರು.