ಉತ್ತರ ಪ್ರದೇಶ: 2017ರಲ್ಲಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಬಳಿಕ 190 ಮಂದಿ ಪೊಲೀಸ್ ‘ಎನ್ಕೌಂಟರ್’ಗೆ ಬಲಿ
PHOTO : PTI
ಹೊಸದಿಲ್ಲಿ,ಅ.24: ಆದಿತ್ಯನಾಥ ಅವರು 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪೊಲೀಸರು ಎನ್ಕೌಂಟರ್ ಹೆಸರಿನಲ್ಲಿ 190 ಜನರನ್ನು ಗುಂಡಿಟ್ಟು ಕೊಂದಿದ್ದಾರೆ. 2017 ಮಾರ್ಚ್ ಮತ್ತು 2023 ಸೆಪ್ಟಂಬರ್ ನಡುವಿನ ಅವಧಿಯಲ್ಲಿ ಪೊಲೀಸ್ ಎನ್ಕೌಂಟರ್ಗಳಲ್ಲಿ 5,591 ಜನರು ಗಾಯಗೊಂಡಿದ್ದಾರೆ. ಕಾರ್ಯಾಚರಣೆಗಳ ಸಂದರ್ಭದಲ್ಲಿ 16 ಪೊಲೀಸ್ ಸಿಬ್ಬಂದಿಗಳು ಮೃತಪಟ್ಟಿದ್ದು,1,478 ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.
ಲಕ್ನೋದಲ್ಲಿ ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಸಿಎಂ ಆದಿತ್ಯನಾಥ್, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಗೊಳಿಸುವುದು ಮತ್ತು ಕ್ರಿಮಿನಲ್ಗಳಲ್ಲಿ ಕಾನೂನಿನ ಭೀತಿಯನ್ನು ಮೂಡಿಸುವುದು ತನ್ನ ಸರಕಾರದ ‘ಅತ್ಯುನ್ನತ ಆದ್ಯತೆ’ಯಾಗಿದೆ ಎಂದು ಹೇಳಿದರು.
ಈ ಎನ್ಕೌಂಟರ್ ಹತ್ಯೆಗಳು ಅಪರಾಧಗಳ ವಿರುದ್ಧ ತನ್ನ ಶೂನ್ಯ ಸಹಿಷ್ಣುತೆ ನೀತಿಯ ಸೂಚಕವಾಗಿವೆ ಎಂದು ಸರಕಾರವು ಹೆಮ್ಮೆ ಪಡುತ್ತಿದ್ದರೆ ಈ ಕಾರ್ಯಾಚರಣೆಗಳನ್ನು ಪ್ರಶ್ನಿಸುತ್ತಿರುವ ಮಾನವ ಹಕ್ಕು ಕಾರ್ಯಕರ್ತರು,ಇವು ಆಕಸ್ಮಿಕ ಘಟನೆಗಳಲ್ಲ, ಯೋಜಿತ ಹತ್ಯೆಗಳಾಗಿವೆ ಎಂದು ಆರೋಪಿಸಿದ್ದಾರೆ. ಆತ್ಮರಕ್ಷಣೆಗಾಗಿ ಪ್ರತಿದಾಳಿಗಳಲ್ಲಿ ಮಾತ್ರ ತಾವು ಜನರನ್ನು ಕೊಲ್ಲುತ್ತೇವೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ರಾಜ್ಯದ ಬಿಜೆಪಿ ಸರಕಾರವು ಕ್ರಿಮಿನಲ್ಗಳ ವಿರುದ್ಧ ಉತ್ತರ ಪ್ರದೇಶ ಗ್ಯಾಂಗ್ಸ್ಟರ್ಗಳು ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆ) ಕಾಯ್ದೆಯನ್ನೂ ಧಾರಾಳವಾಗಿ ಬಳಸುತ್ತಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಕಾಯ್ದೆಯ ದುರ್ಬಳಕೆಯ ಬಗ್ಗೆ ಕೆಲವು ಸಂದರ್ಭಗಳಲ್ಲಿ ಕಳವಳ ವ್ಯಕ್ತಪಡಿಸಿದೆ. ಆದಾಗ್ಯೂ ಜನರನ್ನು ಗ್ಯಾಂಗ್ಸ್ಟರ್ಗಳೆಂದು ಗುರುತಿಸಲು ಮತ್ತು ಅವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಸರಕಾರಕ್ಕೆ ಅಧಿಕಾರವನ್ನು ನೀಡಿರುವ ಈ ಕಾಯ್ದೆಯು ಆದಿತ್ಯನಾಥ್ ಸರಕಾರದ ಪೊಲೀಸ್ ಕಾರ್ಯತಂತ್ರಗಳ ಜೀವಾಳವಾಗಿದೆ. ರಾಜಕೀಯ ಸೇಡು ತೀರಿಸಿಕೊಳ್ಳಲು,ಪ್ರತಿಸ್ಪರ್ಧಿಗಳನ್ನು ಬೆದರಿಸಲು ಮತ್ತು ಸಾಮಾನ್ಯ ನಾಗರಿಕರಿಗೆ ಕಿರುಕುಳ ನೀಡಲು ಸರಕಾರವು ಈ ಕಾಯ್ದೆಯನ್ನು ಬಳಸುತ್ತಿದೆ ಎಂದು ಪ್ರತಿಪಕ್ಷಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಆಗಾಗ್ಗೆ ಆರೋಪಿಸಿದ್ದಾರೆ. ಬಿಜೆಪಿ ಸರಕಾರವು ಪ್ರತಿಪಕ್ಷ ಶಾಸಕರು ಮತ್ತು ನಾಯಕರ ವಿರುದ್ಧವೂ ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿದೆ.
ಅ.21ರಂದು ಹಮೀರ್ಪುರದಲ್ಲಿ ಪೊಲೀಸರು ಅತ್ಯಾಚಾರ ಆರೋಪಿಯೋರ್ವನನ್ನು ಕೊಂದು ಆತನ ಬಳಿಯಿದ್ದ ನಾಡ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ. ಅದೇ ದಿನ,ಹತ್ಯೆಯಾಗಿರುವ ಸಂಸದ ಅತೀಕ್ ಅಹ್ಮದ್ನ ಸಹಚರರಿಂದ 19.30 ಕೋ.ರೂ.ಮೌಲ್ಯದ ಶಸ್ತ್ರಾಸ್ತ್ರಗಳನ್ನು ಕೌಶಾಂಬಿ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ವರ್ಷದ ಪೂರ್ವಾರ್ಧದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಷ್ರಫ್ ಅಹ್ಮದ್ ಅವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಂದಿದ್ದು ಇತ್ತೀಚಿನ ವರ್ಷಗಳಲ್ಲಿ ಕ್ಯಾಮೆರಾದಲ್ಲಿ ದಾಖಲಾಗಿರುವ ಅತಿ ದೊಡ್ಡ ಭದ್ರತಾ ಲೋಪಗಳಲ್ಲೊಂದಾಗಿತ್ತು.
ಪೊಲೀಸರು ನೀಡಿರುವ ಎನ್ಕೌಂಟರ್ ವಿವರಗಳಲ್ಲಿ ಸಾಮ್ಯತೆಯಿದೆ. ಆರೋಪಿಗಳು ಅಥವಾ ಶಂಕಿತ ವ್ಯಕ್ತಿಗಳನ್ನು ಹೆಚ್ಚಾಗಿ ಹೆದ್ದಾರಿಗಳ ಸಮೀಪದ ನಿರ್ಜನ ಸ್ಥಳಗಳಲ್ಲಿ, ಸಾಮಾನ್ಯವಾಗಿ ಕೃಷಿಭೂಮಿಗಳು ಅಥವಾ ನೀರಾವರಿ ಕಾಲುವೆ ಅಥವಾ ಚೆಕ್ಪೋಸ್ಟ್ಗಳ ಬಳಿ ತಡೆಯಲಾಗುತ್ತದೆ. ಯಾವಾಗಲೂ ಬೈಕ್ನಲ್ಲಿ ಸಂಚರಿಸುವ ಶಂಕಿತರು ತಮ್ಮನ್ನು ಸುತ್ತುವರಿಯಲಾಗಿದೆ ಎನ್ನುವುದು ಗೊತ್ತಾದಾಗ ಪೋಲಿಸರತ್ತ ಗುಂಡು ಹಾರಿಸಿದ್ದಾರೆ ಮತ್ತು ಪೋಲಿಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿ ಅವರನ್ನು ಗಾಯಗೊಳಿಸಿದ್ದಾರೆ ಎನ್ನುವುದು ಪೊಲೀಸ್ ವಿವರಣೆಗಳಲ್ಲಿ ಸಾಮಾನ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಬಲಿಪಶುಗಳಿಂದ ನಾಡ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇವು ಸಾಮಾನ್ಯವಾಗಿ 315 ಬೋರ್ನವೇ ಆಗಿವೆ.
ಅ.20ರಂದು ಒಂದೇ ದಿನ ಇದೇ ರೀತಿಯಲ್ಲಿ ಉತ್ತರ ಪ್ರದೇಶದಲ್ಲಿ ನಾಲ್ಕು ಎನ್ಕೌಂಟರ್ಗಳು ನಡೆದಿವೆ.
ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ಸರಕಾರದ ಅವಧಿಗೆ (2012-2017) ಹೋಲಿಸಿದರೆ ಆದಿತ್ಯನಾಥರ 2017ರಿಂದ 2022ರವರೆಗಿನ ಮೊದಲ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚು ಜನರು ‘ಪೊಲೀಸ್ ಕ್ರಮ ’ದಲ್ಲಿ ಕೊಲ್ಲಲ್ಪಟ್ಟಿದ್ದಾರೆ. 2017-18 ಮತ್ತು 2021-22ರ ನಡುವೆ 162 ಜನರು ಪೋಲಿಸ್ ಎನ್ಕೌಂಟರ್ಗಳಲ್ಲಿ ಕೊಲ್ಲಲ್ಪಟ್ಟಿದ್ದರೆ 2012 ಮತ್ತು 2017ರ ನಡುವೆ 41 ಜನರು ಕೊಲ್ಲಲ್ಪಟ್ಟಿದ್ದರು.