2024ರ ಡಿಸೆಂಬರ್ ನಿಂದ ಎಲಾನ್ ಮಸ್ಕ್ ಕಳೆದುಕೊಂಡಿರುವ ಸಂಪತ್ತು 100ಕ್ಕೂ ಅಧಿಕ ದೇಶಗಳ ಜಿಡಿಪಿಗಿಂತ ಹೆಚ್ಚು!

ಎಲಾನ್ ಮಸ್ಕ್ (Photo: PTI)
ಹೊಸದಿಲ್ಲಿ: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ನೂತನ ಸರಕಾರಿ ಕಾರ್ಯಕ್ಷಮತೆ ಇಲಾಖೆ(ಡೋಜ್)ಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ವಿದ್ಯುತ್ ವಾಹನಗಳ ತಯಾರಕ ಟೆಸ್ಲಾದ ಸಿಇಒ ಎಲಾನ್ ಮಸ್ಕ್ ಪ್ರಸ್ತುತ ಕಳೆದ ಮೂರು ತಿಂಗಳುಗಳಿಂದ ಎಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ.
ಇದೇ ವೇಳೆ ಡಿಸೆಂಬರ್ 2024ರಲ್ಲಿ ಪ್ರತಿ ಶೇರಿಗೆ 479.86 ಡಾಲರ್ ಗಳ ಎತ್ತರವನ್ನು ಕಂಡಿದ್ದ ಟೆಸ್ಲಾದ ಶೇರುಗಳ ಬೆಲೆಗಳು ಅರ್ಧದಷ್ಟು ಕುಸಿದಿವೆ. ಡಿಸೆಂಬರ್ 2024ರಲ್ಲಿ ಕಂಪನಿಯು 1.5 ಲಕ್ಷ ಕೋಟಿ ಡಾಲರ್ ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿತ್ತು. ಆ ಸಮಯದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಮಸ್ಕ್ ಅವರ ನಿವ್ವಳ ಮೌಲ್ಯ 464 ಶತಕೋಟಿ ಡಾಲರ್ ಆಗಿತ್ತು.
ಈಗಲೂ ಮಸ್ಕ್ ವಿಶ್ವದ ನಂ.1 ಶ್ರೀಮಂತ ಆಗಿಯೇ ಉಳಿದಿದ್ದಾರೆ. ಆದರೆ 145 ಶತಕೋಟಿ ಡಾಲರ್ ಗಳ ಸಂಪತ್ತನ್ನು ಕಳೆದುಕೊಂಡಿದ್ದು, ಅವರ ನಿವ್ವಳ ಮೌಲ್ಯ ಪ್ರಸ್ತುತ 319.6 ಶತಕೋಟಿ ಡಾಲರ್ ಆಗಿದೆ.
ಮಸ್ಕ್ ಕಳೆದುಕೊಂಡಿರುವ 145 ಶತಕೋಟಿ ಡಾಲರ್ 122 ದೇಶಗಳ ವೈಯಕ್ತಿಕ ಜಿಡಿಪಿಗಿಂತ ಅಧಿಕವಾಗಿದೆ, 2025-26ನೇ ಸಾಲಿಗೆ ಭಾರತದ ರಕ್ಷಣಾ ಬಜೆಟ್ನ ಎರಡು ಪಟ್ಟು ಆಗಿದೆ ಮತ್ತು ನಾಸಾದ ವಾರ್ಷಿಕ ಬಜೆಟ್ನ ಆರು ಪಟ್ಟುಗಳಷ್ಟಾಗಿದೆ.
ಆದರೂ ಮಸ್ಕ್ ಶ್ರೀಮಂತಿಕೆ ಪೈಪೋಟಿಯಲ್ಲಿ ಬಹಳ ಮುಂದಿದ್ದಾರೆ, ನಿರ್ದಿಷ್ಟವಾಗಿ ಹೇಳುವುದಾದರೆ ಅವರು ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅಮೆಝಾನ್ ಸ್ಥಾಪಕ ಜೆಫ್ ಬೆಜೋಸ್ ಅವರಿಗಿಂತ ಸುಮಾರು 110 ಶತಕೋಟಿ ಡಾಲರ್ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ.
2020ರ ಅಂದಾಜಿನಂತೆ ಮಸ್ಕ್ ಅವರ ಸಂಪತ್ತಿನಲ್ಲಿ ಟೆಸ್ಲಾ ಶೇರುಗಳ ಪಾಲು ಶೇ.75ರಷ್ಟಿದೆ ಮತ್ತು ನಿರೀಕ್ಷೆಯಂತೆಯೇ ಟೆಸ್ಲಾದ ಶೇರುಗಳ ದರಗಳಲ್ಲಿ ಏರಿಳಿತಗಳು ಮಸ್ಕ್ ಅವರ ನಿವ್ವಳ ಮೌಲ್ಯದ ಮೇಲೂ ಗಮನಾರ್ಹ ಪರಿಣಾಮಗಳನ್ನು ಬೀರುತ್ತವೆ.
ಕಳೆದ ಮೂರು ತಿಂಗಳುಗಳಲ್ಲಿ ವಾಹನಗಳ ಮಾರಾಟ ಮತ್ತು ಲಾಭಗಳಲ್ಲಿ ಕುಸಿತ,ಮಸ್ಕ್ ರಾಜಕೀಯ ಚಟುವಟಿಕೆಗಳ ವಿರುದ್ಧ ಪ್ರತಿಭಟನೆಗಳು ಮತ್ತು ವಿಶ್ವದ ಶ್ರೀಮಂತ ವ್ಯಕ್ತಿಯ ರಾಜಕೀಯ ಗೊಂದಲಗಳ ಬಗ್ಗೆ ಹೂಡಿಕೆದಾರರ ಕಳವಳಗಳು ಸೇರಿದಂತೆ ಹಲವಾರು ಕಾರಣಗಳು ಟೆಸ್ಲಾ ಶೇರುಗಳ ಬೆಲೆಗಳು ಕುಸಿಯುವಂತೆ ಮಾಡಿವೆ.
► ನಂ.1 ಪಟ್ಟ ತಪ್ಪುವ ಅಪಾಯವಿದೆಯೇ?
ತನ್ನ ಸಂಪತ್ತಿನಲ್ಲಿ ಏರಿಳಿತಗಳು ಮಸ್ಕ್ಗೆ ಹೊಸದೇನಲ್ಲ ಮತ್ತು ಈಗಲೂ ಅವರು ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
2023ರಲ್ಲಿ ಮಸ್ಕ್ ನವಂಬರ್ 2021 ಮತ್ತು ಡಿಸೆಂಬರ್ 2022ರ ನಡುವೆ ತನ್ನ ನಿವ್ವಳ ಮೌಲ್ಯದಲ್ಲಿ 182 ಶತಕೋಟಿ ಡಾಲರ್ ಗಳನ್ನು ಕಳೆದುಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದರು. ಇದು ಮಾನವ ಇತಿಹಾಸದಲ್ಲಿ ದಾಖಲಾಗಿರುವ ವೈಯಕ್ತಿಕ ಸಂಪತ್ತಿನ ಅತ್ಯಂತ ದೊಡ್ಡ ನಷ್ಟವಾಗಿದೆ.
ಮಸ್ಕ್ ಚೇತರಿಕೆಗಳು ಅವರು ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುವಲ್ಲಿ ನಿಜಕ್ಕೂ ಸಮರ್ಥರಾಗಿದ್ದಾರೆ ಎನ್ನುವುದನ್ನು ತೋರಿಸಿವೆ. ಆದರೆ ವರದಿಗಳನ್ನು ನಂಬಬಹುದಾದರೆ ಈಗಿನ ಸಮಯವು ಅವರ ಪಾಲಿಗೆ ವಿಭಿನ್ನವಾಗಬಹುದು ಎಂದು ತಜ್ಞರು ಭಾವಿಸಿದ್ದಾರೆ.
ಮಸ್ಕ್ ಈಗ ಟೆಸ್ಲಾ,ಎಕ್ಸ್,ಸ್ಪೇಸ್ಎಕ್ಸ್ ಜೊತೆಗೆ ಡೋಜ್ ಚಟುವಟಿಕೆಗಳು ಮತ್ತು ತನ್ನ ರಾಜಕೀಯ ಬದ್ಧತೆಗಳನ್ನು ನಿಭಾಯಿಸಬೇಕಿದೆ. ಟೆಸ್ಲಾವನ್ನು ಅದರ ಪ್ರಸ್ತುತ ಸಂಕಷ್ಟದಿಂದ ಅವರು ಪಾರು ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.