ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಜುಲೈ 31ರವರೆಗೆ ವಿಸ್ತರಣೆ
ಸಿಸೋಡಿಯಾ, ಕವಿತಾ | PC : PTI
ಹೊಸದಿಲ್ಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಭಾರತ ರಾಷ್ಟ್ರೀಯ ಸಮಿತಿ (ಬಿಆರ್ಎಸ್) ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ದಿಲ್ಲಿ ನ್ಯಾಯಾಲಯ ಜುಲೈ 31ರವರೆಗೆ ವಿಸ್ತರಿಸಿದೆ.
ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಕೇಂದ್ರಿಯ ತನಿಖಾ ಸಂಸ್ಥೆ ದಾಖಲಿಸಿರುವ ಭ್ರಷ್ಟಾಟಚಾರ ಪ್ರಕರಣದಲ್ಲಿ ಇವರಿಬ್ಬರೂ ಆರೋಪಿಗಳಾಗಿದ್ದು, ಬಂಧನದಲ್ಲಿದ್ದಾರೆ.
ತಿಹಾರ್ ಜೈಲಿನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಿಸೋಡಿಯಾ ಹಾಗೂ ಕವಿತಾ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕವಿತಾ ವಿರುದ್ಧ ಸಿಬಿಐ ಇತ್ತೀಚೆಗೆ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರನ್ನು ಮಾರ್ಚ್ 15ರಂದು ಜಾರಿ ನಿರ್ದೇಶನಾಲಯವು ಅಬಕಾರಿ ನೀತಿಗೆ ಸಂಬಂಧಿಸಿದ ಕಪ್ಪು ಹಣ ಬಿಳುಪು ಪ್ರಕರಣದಲ್ಲಿ ಮಾರ್ಚ್ 15ರಂದು ಬಂಧಿಸಿತ್ತು. ಆನಂತರ ಸಿಬಿಐ ಅವರನ್ನು ಎಪ್ರಿಲ್ 11ರಂದು ತನ್ನ ವಶಕ್ಕೆತೆಗೆದುಕೊಂಡು ಬಂಧಿಸಿತ್ತು.
ಅಬಕಾರಿ ನೀತಿ ಹಗರಣದಲ್ಲಿ ಶಾಮೀಲಾದ ಆರೋಪದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ 2023ರ ಜನವರಿ 26ರಂದು ಬಂಧಿಸಿತ್ತು. ಆನಂತರ ಜಾರಿ ನಿರ್ದೇಶನಾಲಯ (ಈಡಿ) ಕಪ್ಪು ಹಣ ಬಿಳುಪ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 2023ರ ಮಾರ್ಚ್9ರಂದು ಬಂಧಿಸಿತ್ತು.
ಅಬಕಾರಿ ನೀತಿ ಹಗರಣದ ಇನ್ನೋರ್ವ ಆರೋಪಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 8ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.