ಜಾಮೀನು ಬಿಡುಗಡೆ ಕೋರಿ ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ ಸಿಸೋಡಿಯಾ | ನಾಳೆ ವಿಚಾರಣೆ

ಮನೀಶ್ ಸಿಸೋಡಿಯಾ | PC : PTI
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಬಿಡುಗಡೆ ಕೋರಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಹಾಗೂ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರು ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಜಾರಿ ನಿರ್ದೇಶನಾಲಯವು ತನ್ನ ವಿರುದ್ಧ ದಾಖಲಿಸಿರುವ ಕಪ್ಪುಹಣ ಬಿಳುಪು ಪ್ರಕರಣ ಹಾಗೂ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣ ಇವೆರಡರಲ್ಲೂ ಸಿಸೋಡಿಯಾ ಜಾಮೀನು ಬಿಡುಗಡೆ ಕೋರಿ ಮನವಿ ಸಲ್ಲಿಸಿದ್ದಾರೆ.
ಸಿಸೋಡಿಯಾ ಅವರು ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಸಲ್ಲಿಸಿದ ಜಾಮೀನು ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಎಪ್ರಿಲ್ 30ರಂದು ತಳ್ಳಿಹಾಕಿತ್ತು. ಈ ಹಿನ್ನೆಲೆಯಲ್ಲಿ ಅವರು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿಯನ್ನು ಇಂದು ತುರ್ತು ಅಲಿಕೆಗಾಗಿ ಇರಿಸಲಾಗಿತ್ತಾದರೂ, ಶುಕ್ರವಾರ ಅದರ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.
2023ರ ಫೆಬ್ರವರಿ 23ರಿಂದಲೂ ಸಿಸೋಡಿಯಾ ಅವರು ಕಸ್ಟಡಿಯಲ್ಲಿದ್ದಾರೆ. ದಿಲ್ಲಿ ಅಬಕಾರಿ ನೀತಿ ಪರಿಷ್ಕರಣೆ ಹಗರಣಕ್ಕೆ ಸಂಬಂಧಿಸಿ ಸಿಬಿಐ ಹಾಗೂ ಈ.ಡಿ. ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.