ಸೀತಾರಾಮ್ ಯೆಚೂರಿ ಆರೋಗ್ಯ ಸ್ಥಿತಿ ಸ್ಥಿರ; ಚಿಕಿತ್ಸೆಗೆ ಸಕಾರಾತ್ಮಕ ಸ್ಪಂದನೆ: ಸಿಪಿಐಎಂ
ಸೀತಾರಾಮ್ ಯೆಚೂರಿ | PC : PTI
ಹೊಸದಿಲ್ಲಿ: ಭಾರತೀಯ ಕಮ್ಯೂನಿಸ್ಟ್ (ಮಾರ್ಕ್ಸ್ವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಶುಕ್ರವಾರ ಸಿಪಿಐಎಂ ಹೇಳಿಕೆ ಬಿಡುಗಡೆ ಮಾಡಿದೆ.
"ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರಿಗೆ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಗಂಭೀರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ" ಎಂದು ಸಿಪಿಐಎಂ ಹೇಳಿದೆ.
"ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಸೀತಾರಾಮ್ ಯೆಚೂರಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ" ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ನ್ಯುಮೋನಿಯಾದಂತಹ ಎದೆ ಸೋಂಕಿಗೆ ಗುರಿಯಾಗಿದ್ದ 72 ವರ್ಷದ ಯೆಚೂರಿ ಅವರನ್ನು ಆಗಸ್ಟ್ 19ರಂದು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಸ್ವಸ್ಥತೆಯ ನಿಖರ ಸ್ವರೂಪವನ್ನು ಆಸ್ಪತ್ರೆ ಇದುವರೆಗೂ ಬಹಿರಂಗಪಡಿಸಿಲ್ಲ.
Next Story