ಕಾಂಗ್ರೆಸ್ ಸೇರ್ಪಡೆಯಾದ ಆರು ಮಂದಿ ಬಿಆರ್ಎಸ್ ವಿಧಾನ ಪರಿಷತ್ ಸದಸ್ಯರು
Photo credit: thehindu.com
ಹೈದರಾಬಾದ್: ಭಾರತ್ ರಾಷ್ಟ್ರೀಯ ಸಮಿತಿ (BRS) ಪಕ್ಷಕ್ಕೆ ಮತ್ತೊಂದು ಆಘಾತವಾಗಿದ್ದು, ಗುರುವಾರ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸಮ್ಮುಖದಲ್ಲಿ ಆರು ಮಂದಿ ಬಿಆರ್ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದರು.
ದಂಡೆ ವಿಠ್ಠಲ್, ಭಾನು ಪ್ರಸಾದ್, ಬಿ.ದಯಾನಂದ್, ಪ್ರಭಾಕರ್ ರಾವ್, ಎಗ್ಗೆ ಮಲ್ಲೇಶಂ ಹಾಗೂ ಬಸವರಾಜು ಸರಯ್ಯ ಕಾಂಗ್ರೆಸ್ ಸೇರ್ಪಡೆಯಾದ ಬಿಆರ್ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು. ಅಮಾವಾಸ್ಯೆಗೂ ಮುನ್ನ ತಾವು ಕಾಂಗ್ರೆಸ್ ಸೇರ್ಪಡೆಯಾಗಬೇಕು ಎಂದು ಬಿಆರ್ಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ಪಟ್ಟು ಹಿಡಿದಿದ್ದರಿಂದ ಗುರುವಾರ ಮಧ್ಯರಾತ್ರಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ. ಇಂದು ಭೀಮನ ಅಮಾವಾಸ್ಯೆಯಾಗಿದೆ.
ಆದರೆ, ಹೊಸದಿಲ್ಲಿಯಿಂದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ರಾಜಧಾನಿಗೆ ಮರಳುವುದು ಮಧ್ಯರಾತ್ರಿಯಾಗಿದ್ದರಿಂದ, ಅವರೆಲ್ಲ ಅಲ್ಲಿಯವರೆಗೂ ಪಕ್ಷ ಸೇರ್ಪಡೆಗೆ ಕಾಯಬೇಕಾಯಿತು ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಬಲ 12ಕ್ಕೆ ಏರಿಕೆಯಾಗಲಿದೆ. ಇದೇ ವೇಳೆ ಭಾರತ್ ರಾಷ್ಟ್ರೀಯ ಸಮಿತಿ ಪಕ್ಷದ ಸದಸ್ಯ ಬಲ 21ಕ್ಕೆ ಇಳಿಕೆಯಾಗಿದೆ.