40 ಮಹಡಿ ಕಟ್ಟಡದಲ್ಲಿ ಲಿಫ್ಟ್ ಕುಸಿದು ಆರು ಮಂದಿ ಮೃತ್ಯು
Photo: PTI
ಥಾಣೆ: ನಿರ್ಮಾಣ ಹಂತದಲ್ಲಿದ್ದ 40 ಮಹಡಿ ಕಟ್ಟಡದಲ್ಲಿ ಲಿಫ್ಟ್ ಕುಸಿದು ಸಂಭವಿಸಿದ ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಭಾನುವಾರ ಸಂಜೆ 6ರ ಸುಮಾರಿಗೆ ಈ ಘಟನೆ ನಡೆದಿದ್ದು, ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.
ಬಲ್ಕುಂ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ "ರನ್ವಲ್ ಈರೆನ್" ಕಟ್ಟಡದಲ್ಲಿ ದಿನದ ಕೆಲಸ ಮುಗಿಸಿ ಕೂಲಿ ಕಾರ್ಮಿಕರು ಸರ್ವೀಸ್ ಲಿಫ್ಟ್ ನಲ್ಲಿ ಕಟ್ಟಡದ ಬೇಸ್ಮೆಂಟ್ಗೆ ಇಳಿಯುತ್ತಿದ್ದಾಗ ಲಿಫ್ಟ್ ನ ರೋಪ್ ತುಂಡಾಗಿ ಈ ದುರಂತ ಸಂಭವಿಸಿದೆ.
ಈ ಲಿಫ್ಟ್ 40ನೇ ಮಹಡಿಯಿಂದ ತುಂಡಾಗಿ ಬಿದ್ದಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಪ್ರಾದೇಶಿಕ ವಿಕೋಪ ನಿರ್ವಹಣೆ ಘಟಕದ ಮುಖ್ಯಸ್ಥ ಯಾಸಿನ್ ತದ್ವಿ ಹೇಳಿದ್ದಾರೆ. ಆದರೆ ನಿರ್ಮಾಣ ಕಂಪನಿಯ ವಕ್ತಾರ, ಲಿಫ್ಟ್ 13ನೇ ಮಹಡಿಯಿಂದ ಕುಸಿದಿದೆ ಎಂದು ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ನುಜ್ಜುಗುಜ್ಜಾದ ಲಿಫ್ಟ್ ನಿಂದ ಮೃತದೇಹಗಳನ್ನು ಹೊರಕ್ಕೆ ತೆಗೆದರು. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಒಬ್ಬನನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹೇಂದ್ರ ಚೌಪಾಲ್ (32), ರೂಪೇಶ್ ಕುಮಾರ್ ದಾಸ್ (21), ಹರೂನ್ ಶೇಖ್ (47), ಮಿತಿಲೇಶ್ (35) ಹಾಗೂ ಕರಿದಾಸ್ (38) ಘಟನೆಯಲ್ಲಿ ಮೃತಪಟ್ಟವರು. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ.