ಆರನೇ ಹಂತದ ಲೋಕಸಭಾ ಚುನಾವಣೆ | ಶೇ.39ರಷ್ಟು ಅಭ್ಯರ್ಥಿಗಳು ಕೋಟ್ಯಾಧೀಶರು
ರೋಹ್ಟಕ್ ನ ಪಕ್ಷೇತರ ಅಭ್ಯರ್ಥಿ ಮಾಸ್ಟರ್ ರಣಧೀರ್ ಸಿಂಗ್ ಆಸ್ತಿ 2 ರೂ.!
ನವೀನ್ ಜಿಂದಾಲ್ , ಸಂತೃಪ್ತ ಮಿಶ್ರಾ | PC : PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಕಣದಲ್ಲಿರುವ 866 ಅಭ್ಯರ್ಥಿಗಳ ಪೈಕಿ 338 ಜನರು (ಶೇ.39) ಕೋಟ್ಯಾಧೀಶರಾಗಿದ್ದು, ಸರಾಸರಿ 6.21 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ ಎಂದು ಸರಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ. ಆರನೇ ಹಂತದ ಚುನಾವಣೆಗಾಗಿ ಮೇ 25ರಂದು ಮತದಾನ ನಡೆಯಲಿದೆ.
ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವೀನ್ ಜಿಂದಾಲ್ 1,241 ಕೋಟಿ ರೂ.ಗಳ ಅತ್ಯಂತ ಹೆಚ್ಚಿನ ಆಸ್ತಿಯನ್ನು ಘೋಷಿದ್ದರೆ, ಒಡಿಶಾದ ಕಟಕ್ ಲೋಕಸಭಾ ಕ್ಷೇತ್ರದ ಬಿಜೆಡಿ ಅಭ್ಯರ್ಥಿ ಸಂತೃಪ್ತ ಮಿಶ್ರಾ(482 ಕೋಟಿ ರೂ.) ಮತ್ತು ಕುರುಕ್ಷೇತ್ರದ ಆಪ್ ಅಭ್ಯರ್ಥಿ ಸುಶೀಲ ಗುಪ್ತಾ (169 ಕೋಟಿ ರೂ.) ನಂತರದ ಸ್ಥಾನಗಳಲ್ಲಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಬಿಜೆಡಿಯ ಎಲ್ಲ ಆರೂ ಅಭ್ಯರ್ಥಿಗಳು, ಜೆಡಿಯು ಮತ್ತು ಆರ್ ಜೆ ಡಿ ಯ ತಲಾ ನಾಲ್ಕೂ ಅಭ್ಯರ್ಥಿಗಳು, ಬಿಜೆಪಿಯ 51 ಅಭ್ಯರ್ಥಿಗಳ ಪೈಕಿ 48 (ಶೇ.94),ಎಸ್ಪಿಯ 12 ಅಭ್ಯರ್ಥಿಗಳ ಪೈಕಿ 11 (ಶೇ.92),ಕಾಂಗ್ರೆಸ್ನ 25 ಅಭ್ಯರ್ಥಿಗಳ ಪೈಕಿ 20(ಶೇ.80),ಆಪ್ನ ಐವರು ಅಭ್ಯರ್ಥಿಗಳ ಪೈಕಿ ನಾಲ್ವರು (ಶೇ.80) ಮತ್ತು ಟಿಎಂಸಿಯ ಒಂಬತ್ತು ಅಭ್ಯರ್ಥಿಗಳ ಪೈಕಿ ಏಳು (ಶೇ.78) ಅಭ್ಯರ್ಥಿಗಳು ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಘೋಷಿಸಿದ್ದಾರೆ.
ರೋಹ್ಟಕ್ ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಮಾಸ್ಟರ್ ರಣಧೀರ್ ಸಿಂಗ್ ಎರಡು ರೂ.ಗಳ ಕನಿಷ್ಠ ಆಸ್ತಿಯನ್ನು ಘೋಷಿಸಿದ್ದರೆ, ಪ್ರತಾಪಗಡದಲ್ಲಿ ಎಸ್ಯುಸಿಐ (ಸಿ) ಅಭ್ಯರ್ಥಿ ರಾಮಕುಮಾರ್ ಯಾದವ್ 1,686 ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ,
ಸುಮಾರು 411 (ಶೇ.47) ಅಭ್ಯರ್ಥಿಗಳು ತಮ್ಮ ಅಫಿಡವಿಟ್ಗಳಲ್ಲಿ ಸಾಲಗಳನ್ನು ಘೋಷಿಸಿದ್ದಾರೆ.
866 ಅಭ್ಯರ್ಥಿಗಳ ಪೈಕಿ 180 (ಶೇ.21) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದರೆ, 141 ಅಭ್ಯರ್ಥಿಗಳ (ಶೇ.16) ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.