ಮುಸ್ಲಿಂ ಬಾಲಕನಿಗೆ ಹೊಡೆಯುವಂತೆ ಸೂಚಿಸಿದ್ದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು
ಮುಝಫ್ಫರ್ ನಗರ್: ತರಗತಿಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಆತನ ಸಹಪಾಠಿಗಳಿಗೆ ಸೂಚಿಸಿದ್ದ ಖಾಸಗಿ ಶಾಲೆಯೊಂದರ ಶಿಕ್ಷಕಿ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದೆ ಎಂದು indiatoday.in ವರದಿ ಮಾಡಿದೆ.
ಅಳುತ್ತಿರುವ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಇತರ ಮಕ್ಕಳು ಹೊಡೆಯುತ್ತಿರುವುದು ಹಾಗೂ ಆ ದೃಶ್ಯವನ್ನು ಶಿಕ್ಷಕಿಯು ನೋಡುತ್ತಾ ಕುಳಿತಿರುವ ವಿಡಿಯೊ ವೈರಲ್ ಆಗಿ, ಅದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಈ ವಿಡಿಯೊ ಉತ್ತರ ಪ್ರದೇಶದ ಮುಝಫ್ಫರ್ ನಗರದ ಶಾಲೆಯೊಂದರದ್ದು ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 323 ಹಾಗೂ 504ರ ಅಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ.
ವಿಡಿಯೊ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಪ್ರಜಾಪತ್, “ಗಣಿತದ ಮಗ್ಗಿಯನ್ನು ಕಲಿಯದ ಕಾರಣ ತಮ್ಮ ಸಹಪಾಠಿಗೆ ಹೊಡೆಯುವಂತೆ ಇತರೆ ಮಕ್ಕಳಿಗೆ ಶಿಕ್ಷಕಿಯೊಬ್ಬರು ಸೂಚಿಸುತ್ತಿರುವ ವಿಡಿಯೊವಿಂದು ಮನ್ಸೂರ್ ಪುರ್ ಪೊಲೀಸ್ ಠಾಣೆಗೆ ತಲುಪಿದೆ. ಆ ವಿಡಿಯೊದಲ್ಲಿ ಕೆಲ ಆಕ್ಷೇಪಾರ್ಹ ಹೇಳಿಕೆಗಳೂ ಇವೆ” ಎಂದು ತಿಳಿಸಿದ್ದಾರೆ.
“ಘಟನೆಯ ಕುರಿತು ಪ್ರಾಥಮಿಕ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಶಿಕ್ಷಕಿಯ ವಿರುದ್ಧ ಇಲಾಖಾ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ” ಎಂದೂ ಅವರು ಹೇಳಿದ್ದಾರೆ.