ಜೈಲಿನಲ್ಲಿ ಮುಖ್ತಾರ್ ಅನ್ಸಾರಿಗೆ ನಿಧಾನ ವಿಷಪ್ರಾಶನ: ಕುಟುಂಬಸ್ಥರ ಆರೋಪ
ಮುಖ್ತಾರ್ ಅನ್ಸಾರಿ | Photo: PTI
ಲಕ್ನೋ: ಸೆರೆಮನೆವಾಸದಲ್ಲಿರುವ ಗ್ಯಾಂಗ್ ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಜೈಲಿನ ಶೌಚಾಲಯದ ಬಳಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಬಂದಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮಂಗಳವಾರ ಮುಂಜಾನೆ ಕರೆದೊಯ್ಯಲಾಯಿತು. 62 ವರ್ಷ ವಯಸ್ಸಿನ ಅನ್ಸಾರಿ ಉತ್ತರ ಪ್ರದೇಶದ ಮಾವು ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅನ್ಸಾರಿಗೆ ಹೊಟ್ಟೆನೋವು ಮತ್ತು ವಾಕರಿಕೆ ಸಮಸ್ಯೆ ಕಂಡುಬಂದಿದೆ. ಸೂಕ್ತ ಚಿಕಿತ್ಸೆ ಬಳಿಕ ಅವರನ್ನು ಸಂಜೆ ಬಿಡುಗಡೆ ಮಾಡಲಾಗಿದೆ.
ಉತ್ತರ ಪ್ರದೇಶದಿಂದ ಪಂಜಾಬ್ ವರೆಗೆ 2005ರಿಂದೀಚೆಗೆ ಅನ್ಸಾರಿ ವಿರುದ್ಧ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ಬಾಕಿ ಇವೆ. ಎಂಟು ಪ್ರಕರಣಗಳಲ್ಲಿ ಅನ್ಸಾರಿಗೆ ಶಿಕ್ಷೆಯಾಗಿದೆ. 2022ರ ಸೆಪ್ಟೆಂಬರ್ನಿಂದೀಚೆಗೆ ಉತ್ತರ ಪ್ರದೇಶದ ಎರಡು ನ್ಯಾಯಾಲಯಗಳು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿವೆ. ಪ್ರಸ್ತುತ 2021ರ ಏಪ್ರಿಲ್ನಿಂದ ಬಂದಾ ಜೈಲಿನಲ್ಲಿ ಇರಿಸಲಾಗಿದೆ.
ಅನ್ಸಾರಿ ವಕೀಲ ರಣಧೀರ್ ಸಿಂಗ್ ಸುಮನ್ ಬಾರಾಬಂಕಿ ನ್ಯಾಯಾಲಯದಲ್ಲಿ ಕಳೆದ ವಾರ ಅರ್ಜಿ ಸಲ್ಲಿಸಿ, ಬಂದಾ ಜೈಲಿನ ಸಿಬ್ಬಂದಿ ತಮ್ಮ ಕಕ್ಷಿದಾರರಿಗೆ ನಿಧಾನ ವಿಷಪ್ರಾಶನ ಮಾಡುತ್ತಿದ್ದಾರೆ ಎಂದು ದೂರಿದ್ದರು. ಈ ಬಗ್ಗೆ ಸೂಕ್ತ ವೈದ್ಯಕೀಯ ತಪಾಸಣೆಗೆ ಆದೇಶಿಸಬೇಕು ಎಂದು ಕೋರಿದ್ದರು.
ಅನ್ಸಾರಿ ಸಹೋದರ ಮತ್ತು ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಆಸ್ಪತ್ರೆಗೆ ಭೇಟಿ ನೀಡಿ, ಜೈಲಿನಲ್ಲಿ ಸಹೋದರನಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ. ಅನ್ಸಾರಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದರು.