ಕಾಂಗ್ರೆಸ್ ಪಕ್ಷದ “ಪ್ರಜಾಪ್ರಭುತ್ವ ರಕ್ಷಿಸಿ” ಕರೆ ವಿರುದ್ಧ ಸ್ಮೃತಿ ಇರಾನಿ ಟೀಕಾಸ್ತ್ರ
Photo: PTI
ಚೆನ್ನೈ : ಕಾಂಗ್ರೆಸ್ ಪಕ್ಷದ ʼಪ್ರಜಾಪ್ರಭುತ್ವ ರಕ್ಷಿಸಿʼ ಕರೆಯ ಬಗ್ಗೆ ಟೀಕಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ನಿಷೇಧಿತ ಪಿಎಫ್ಐನ ರಾಜಕೀಯ ಘಟಕವಾದ ಎಸ್ಡಿಪಿಐ ಬೆಂಬಲ ಪಡೆದುಕೊಂಡಿರುವ ಹಾಗೂ “ಸಂವಿಧಾನಕ್ಕೆ ಬೆಂಕಿ ಹಚ್ಚಿದ್ದಕ್ಕೆ ಹೆಸರಾದ” ಡಿಎಂಕೆ ಜೊತೆ ಮೈತ್ರಿ ಸಾಧಿಸಿದ ಪಕ್ಷಕ್ಕೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಉತ್ತರ ಚೆನ್ನೈ ಅಭ್ಯರ್ಥಿ ಆರ್.ಸಿ ಪೌಲ್ ಕನಗರಾಜ್ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡು ಸ್ಮೃತಿ ಮಾತನಾಡುತ್ತಿದ್ದರು.
“ತನ್ನ ಆಧ್ಯಾತ್ಮಿಕ ಶಕ್ತಿಗೆ ಹೆಸರು ಪಡೆದ ರಾಜ್ಯದಲ್ಲಿ ನಾನಿಂದು ನಿಂತಿದ್ದೇನೆ. ಈ ರಾಜ್ಯ ನಮ್ಮ ಸಂಸ್ಕೃತಿಗೆ ಹೆಸರು ಪಡೆದಿದೆ, ಇದೇ ಕಾರಣಕ್ಕೆ ಡಿಎಂಕೆ ನಾಯಕರು ಸನಾತನ ಧರ್ಮದ ಮೇಲೆ ದಾಳಿ ನಡೆಸಿದಾಗ ದೇಶ ಆಕ್ರೋಶಿತವಾಗಿದೆ. ಡಿಎಂಕೆ ನಾಯಕರು ಹಿಂದೂ ಧರ್ಮಕ್ಕೆ ಅಪಖ್ಯಾತಿ ತಂದಿದ್ದಾರೆ. ಇಂದು ಅವರು ಭಾರತ ಮತ್ತು ಭಾರತೀಯತೆ ಬಗ್ಗೆ ಮಾತನಾಡುವಾಗ ದೇಶದೆದುರು ಅವರ ಬಣ್ಣ ಬಯಲಾಗಿದೆ,” ಎಂದು ಅವರು ಹೇಳಿದರು.
“ಇಂದು ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ರಕ್ಷಿಸಬೇಕು ಎಂದು ಹೇಳುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಂಕಿ ಹಚ್ಚಿದ್ದಕ್ಕೆ ಹೆಸವಾಸಿಯಾಗಿರುವ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಪಕ್ಷದಿಂದ ಈ ಹೇಳಿಕೆ ಹೇಗೆ ಸಾಧ್ಯ,” ಎಂದು 80ರ ದಶಕಗಳಲ್ಲಿ ಹಿಂದಿ ವಿರೋಧಿ ಪ್ರತಿಭಟನೆ ವೇಳೆ ಸಂವಿಧಾನದ ಪ್ರತಿಗಳನ್ನು ಸುಟ್ಟ ಆರೋಪ ಎದುರಿಸಿದ ಪಕ್ಷವನ್ನು ಉಲ್ಲೇಖಿಸಿದರು.
“ನಮ್ಮ ಅಜೆಂಡಾ ವಿಕಸಿತ ಭಾರತ ಎಂದು ಬಿಜೆಪಿ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಭಾರತಕ್ಕೆ ತಮ್ಮ ಅಜೆಂಡಾ ಏನೆಂದು ಇಂಡಿಯಾ ಮೈತ್ರಿಕೂಟ ಹೇಳಬಹುದೇ? ಈ ಮೈತ್ರಿಕೂಟಕ್ಕೆ ನೇತಾರರು ಮತ್ತು ನೀತಿಯಿಲ್ಲ ಆದರೆ ದೇಶವನ್ನು ಲೂಟುವ ಉದ್ದೇಶ ಅವರಿಗಿದೆ ಎಂದು ನಮಗೆ ಗೊತ್ತು,” ಎಂದು ಆರೋಪಿಸಿದರು.