ಜಮ್ಮು ಕಾಶ್ಮೀರದಲ್ಲಿ ಹಿಮಪಾತ: ಓರ್ವ ವಿದೇಶಿ ಪ್ರಜೆ ಸಾವು, ಇನ್ನೋರ್ವ ನಾಪತ್ತೆ
Photo: PTI
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಗುಲ್ಮಾರ್ಗದ ಸ್ಕೀ ಇಳಿಜಾರಿನಲ್ಲಿ ಹಿಮಪಾತ ಸಂಭವಿಸಿದ ಪರಿಣಾಮ ಓರ್ವ ವಿದೇಶಿ ಪ್ರಜೆ ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಖಿಲಾನ್ಮಾರ್ಗ್ ಪ್ರದೇಶದಲ್ಲಿ ಗುರುವಾರ ಸುುಮಾರು 2 ಗಂಟೆಗೆ ಹಿಮಪಾತ ಸಂಭವಿಸಿತು ಹಾಗೂ ಕೊಂಗ್ಡೂರಿ ಇಳಿಜಾರಿಗೆ ಅಪ್ಪಳಿಸಿತು. ಇದರಿಂದ ಹಲವು ಸ್ಕೀಯರ್ಸ್ ಗಳು ಸಿಲುಕಿದರು. ಅವರಲ್ಲಿ ಓರ್ವರು ಮೃತಪಟ್ಟರು, ಇನ್ನೋರ್ವರು ನಾಪತ್ತೆಯಾಗಿದ್ದಾರೆ. ಇತರ ಐವರು ಸ್ಕೀಯರ್ಸ್ಗಳನ್ನು ರಕ್ಷಿಸಲಾಗಿದೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿದೇಶಿಯರು ಸ್ಥಳೀಯರು ಇಲ್ಲದೆ ಸ್ಕೀ ಇಳಿಜಾರಿಗೆ ಸ್ಕೀಯಿಂಗ್ಗೆ ಹೋಗಿದ್ದರು. ಈ ಸಂದರ್ಭ ಹಿಮಪಾತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಜಮ್ಮು ಹಾಗೂ ಕಾಶ್ಮೀರದ ಸೇನೆ ಹಾಗೂ ಗಸ್ತು ತಂಡದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
‘‘ಓರ್ವ ಸ್ಕೀಯರ್ಸ್ ಮೃತಪಟ್ಟಿದ್ದಾರೆ. ಓರ್ವ ನಾಪತ್ತೆಯಾಗಿದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ. ಘಟನೆ ಕುರಿತ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ವಿದೇಶಿ ಪ್ರಜೆಯ ಗುರುತು ಇದುವರೆಗೆ ತಿಳಿದು ಬಂದಿಲ್ಲ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.