ಅದಾನಿ ಸಮೂಹಕ್ಕೆ ಹಿನ್ನಡೆ?: ಬಂದರು ಯೋಜನೆ ಒಪ್ಪಂದವನ್ನು ರದ್ದುಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ
Photo: X/@gautam_adani
ಕೋಲ್ಕತ್ತಾ: ತಾಜ್ ಪುರ್ ಆಳ ಸಮುದ್ರ ಬಂದರನ್ನು ಅಭಿವೃದ್ಧಿಪಡಿಸಲು ಕಳೆದ ವರ್ಷ ಹಸ್ತಾಂತರ ಮಾಡಲಾಗಿದ್ದ ಸಮ್ಮತಿ ಪತ್ರವನ್ನು ವಿಸರ್ಜಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ. ಒಪ್ಪಿಗೆ ಪತ್ರವು ಔಪಚಾರಿಕ ಕರಾರು ಅಂತಿಮಗೊಳ್ಳುವುದಕ್ಕೂ ಮುನ್ನ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ನಡುವೆ ಏರ್ಪಡುವ ಪ್ರಾಥಮಿಕ ಹಂತದ ಸಮ್ಮತಿ ದಾಖಲೆಯಾಗಿದೆ.
ಮಂಗಳವಾರ ಬಂಗಾಳ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಈ ಅಚ್ಚರಿಯ ಪ್ರಕಟಣೆಯನ್ನು ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೂ. 25,000 ಕೋಟಿ ಮೊತ್ತದ ತಾಜ್ ಪುರ್ ಆಳ ಸಮುದ್ರ ಬಂದರು ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಸರ್ಕಾರವು ಶೀಘ್ರವೇ ಮರು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.
“ಪ್ರಸ್ತಾವಿತ ತಾಜ್ ಪುರ್ ಆಳ ಸಮುದ್ರ ಯೋಜನೆಯು ಸಿದ್ಧವಾಗಿದೆ. ನೀವೆಲ್ಲರೂ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಈ ಯೋಜನೆಯ ಸುಮಾರು ರೂ. 25,000 ಕೋಟಿ ಮೊತ್ತದ ಬಂಡವಾಳವನ್ನು ಆಕರ್ಷಿಸಲಿದೆ” ಎಂದು ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ. ಇದರಿಂದಾಗಿ, ಕಳೆದ ವರ್ಷ ಈ ಯೋಜನೆಯನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದ ಅದಾನಿ ಸಮೂಹದ ಹಣೆಬರಹದ ಕುರಿತು ಊಹೋಪೋಹಗಳು ಭುಗಿಲೆದ್ದಿವೆ.
ಇದಕ್ಕೂ ಮುನ್ನ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅದಾನಿ ಬಂದರುಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಣ್ ಅದಾನಿ ಅವರಿಗೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಲ್ಲಿ ಸಮ್ಮತಿಯ ಪತ್ರವನ್ನು ಹಸ್ತಾಂತರಿಸಿದ್ದರು. ಇದಕ್ಕೂ ಎರಡು ತಿಂಗಳು ಮುನ್ನ ಬಂಗಾಳ ಜಾಗತಿಕ ವ್ಯಾಪಾರ ಶೃಂಗಸಭೆ, 2022ರಲ್ಲಿ ಉದ್ಯಮಿ ಗೌತಮ್ ಅದಾನಿ ಭಾಗವಹಿಸಿ, ರೂ. 10,000 ಕೋಟಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದ ನಂತರ ಈ ಸಮ್ಮತಿ ಪತ್ರವನ್ನು ಹಸ್ತಾಂತರಿಸಲಾಗಿತ್ತು.
ಅದಾನಿ ಸಮೂಹಕ್ಕೆ ಹಸ್ತಾಂತರಿಸಲಾಗಿದ್ದ ಸಮ್ಮತಿ ಪತ್ರವನ್ನು ವಿಸರ್ಜಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಳಿ ಬಂದಿರುವ ನಗದಿಗಾಗಿ ಪ್ರಶ್ನೆ ವಿವಾದದ ಬೆನ್ನಿಗೇ ಬಂದಿರುವುದು ಕುತೂಹಲ ಮೂಡಿಸಿದೆ.