ಪತ್ನಿ, ಪುತ್ರಿಯನ್ನು ಕತ್ತು ಹಿಸುಕಿ ಕೊಂದು ಅಗ್ನಿ ಅವಘಡವೆಂದು ಬಿಂಬಿಸಲು ಯತ್ನಿಸಿದ ಯೋಧನ ಬಂಧನ
ಜೋಧಪು; ನಿದ್ರಿಸುತ್ತಿದ್ದ ತನ್ನ ಪತ್ನಿ ಹಾಗೂ ಪುತ್ರಿಯನ್ನು ಹತ್ಯೆಗೈದು, ಆಕಸ್ಮಿಕ ಸಾವೆಂಬಂತೆ ಬಿಂಬಿಸಲು ಯತ್ನಿಸಿದ ಸೇನಾಯೋಧನೊಬ್ಬನನ್ನು ರಾಜಸ್ಥಾನ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆರೋಪಿ ರಾಮಪ್ರಸಾದ್ ರವಿವಾರ ಮುಂಜಾನೆ ಈ ಕರಾಳ ಕೃತ್ಯವನ್ನು ಎಸಗಿದ್ದನೆನ್ನಲಾಗಿದೆ. ಕುಟುಂಬ ಸದಸ್ಯರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿತ್ತು. ಉಸಿರುಕಟ್ಟಿಸುವಿಕೆ ಹಾಗೂ ಸುಟ್ಟ ಗಾಯಗಳಿಂದ ಸಾವು ಸಂಭವಿಸಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು.
ವರದಿಯ ಆಧಾರದಲ್ಲಿ ಪೊಲೀಸರು ರಾಮಪ್ರಸಾದ್‌ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದರು. ತನ್ನ ಪತ್ನಿ ರುಕ್ಮಿಣಾ (25) ಹಾಗೂ ಪುತ್ರಿ ರಿಧಿಮಾ (2) ರನ್ನು ಹತ್ಯೆಗೈದಿರುವುದನ್ನು ಆತ ಒಪ್ಪಿಕೊಂಡನೆಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಸಿಕ್ಕಿಂ ನಿವಾಸಿಯಾದ ರಾಮ್‌ಪ್ರಸಾದ್, ನೇಪಾಳ ರುಕ್ಮಿಣಾ ಅವರನ್ನು 2020ರ ಜನವರಿಯಲ್ಲಿ ವಿವಾಹವಾಗಿದ್ದರು. 2020ರ ಆಗಸ್ಟ್‌ನಿಂದ ಆತನನ್ನು ಜೋಧ್‌ಪುರದ ಸೇನಾ ನೆಲೆಯಲ್ಲಿ ನಿಯೋಜನೆಗೊಂಡಿದ್ದ. ದಂಪತಿ ನಡುವೆ ಆಗಾಗ್ಗೆ ಕಲಹವಾಗುತ್ತಿತ್ತೆಂದು ಜೋಧಪುರದ ಡಿಸಿಪಿ (ಪೂರ್ವ) ಅಮೃತಾ ದುಹಾನ್ ತಿಳಿಸಿದ್ದಾರೆ.
‘‘ಪತ್ನಿ ರಿಧಿಮಾಳನ್ನು ಹತ್ಯೆಗೈಯಲು ರಾಮ್‌ಪ್ರಸಾದ್ ಸಂಚು ರೂಪಿಸಿದ್ದ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ತನ್ನ ಎರಡು ವರ್ಷ ವಯಸ್ಸಿನ ಪುತ್ರಿಯನ್ನು ಕೂಡಾ ಕೊಲ್ಲಲು ಆತ ನಿರ್ಧರಿಸಿದ್ದನೆಂದು ’’ ದುಹಾನ್ ತಿಳಿಸಿದ್ದಾರೆ.
ಮಂಗಳವಾರ ನಸುಕಿನಲ್ಲಿ 4 ಗಂಟೆಗೆ ಪತ್ನಿ ಹಾಗೂ ಮಗಳು ಹಾಸಿಗೆಯಲ್ಲಿ ನಿದ್ರಿಸುತ್ತಿದ್ದಾಗ ರಾಮದಾಸ್ ಇಬ್ಬರನ್ನೂ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಆನಂತರ ಪುರಾವೆ ನಾಶಪಡಿಸುವುದಕ್ಕಾಗಿ ಮೃತದೇಹಗಳ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಕೊಟ್ಟಿದ್ದಾನೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆನಂತರ ಮನೆಯಿಂದ ಹೊರಗೋಡಿ ಬಂದು ಕೂಲರ್‌ನಲ್ಲಿ ಸಂಭವಿಸಿದ ಶಾರ್ಟ್‌ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಪತ್ನಿ ಹಾಗೂ ಮಗು ಜೀವಂತದಹನಗೊಂಡರೆಂದು ಆತ ಹೇಳಿಕೊಂಡಿದ್ದಾನೆ. ಇಬ್ಬರನ್ನೂ ಬೆಂಕಿಯಿಂದ ರಕ್ಷಿಸಲು ತಾನು ಯತ್ನಿಸಿದ್ದಾಗಿಯೂ ಆತ ಹೇಳಿದ್ದನೆಂದು ದುಹಾನ್ ಹೇಳಿದ್ದಾರೆ.
ಸೇನೆಯಲ್ಲಿ ಕ್ಲರ್ಕ್ ಹುದ್ದೆಯಿಂದ ನಾಯ್ಕ್ ಹುದ್ದೆಗೆ ಭಡ್ತಿಪಡೆದಿದ್ದ ರಾಮಪ್ರಸಾದ್ ಸೋಮವಾರ ತರಬೇತಿಗಾಗಿ ಬೆಂಗಳೂರಿಗೆ ತೆರಳುವವನಿದ್ದ.
ರಾಮ್‌ಪ್ರಸಾದ್‌ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.