ಕೆಲವೊಮ್ಮೆ ಪಟ್ಟಾಭಿಷೇಕಕ್ಕೆ ಕಾಯುತ್ತಿರುವವರು ಗಡೀಪಾರಾಗಿಬಿಡುತ್ತಾರೆ: ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಚೌಹಾಣ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ (PTI)
ಭೋಪಾಲ್: ಕೆಲವೊಮ್ಮೆ ಪಟ್ಟಾಭಿಷೇಕಕ್ಕೆ ಕಾಯುತ್ತಿರುವವರು ವನವಾಸಕ್ಕೆ ತೆರಳಬೇಕಾಗುತ್ತದೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹೇಳಿದ್ದಾರೆ.
ನವೆಂಬರ್ 2023ರಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಭಾರಿ ಜಯಭೇರಿ ಬಾರಿಸಿದ ನಂತರ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಚೌಹಾಣ್ ಬದಲು ಮೋಹನ್ ಯಾದವ್ ಅವರನ್ನು ಪಕ್ಷವು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿತ್ತು.
ತಮ್ಮ ಸ್ವಕ್ಷೇತ್ರ ಬುಧ್ನಿಯ ಶಹಗಂಜ್ ನಲ್ಲಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಚೌಹಾಣ್, ನಾನು ಮುಂದೆಯೂ ಜನರ ನಡುವೆಯೇ ಇರುತ್ತೇನೆ, ವಿಶೇಷವಾಗಿ ನನ್ನ ಸಹೋದರಿಯರೊಂದಿಗೆ ಎಂದು ಭಾವುಕವಾಗಿ ಹೇಳಿದ್ದಾರೆ.
“ನಾನು ಎಲ್ಲಿಯೂ ಹೋಗುವುದಿಲ್ಲ. ನಾನಿಲ್ಲೇ ಜೀವಿಸುವೆ ಮತ್ತು ಸಾಯುವೆ” ಎಂದು ಗುಂಪಿನಲ್ಲಿದ್ದ ಕೆಲವು ಮಹಿಳೆಯರು, “ಅಣ್ಣಾ, ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಬೇಡ” ಎಂದು ಕೂಗಿದಾಗ ಶಿವರಾಜ್ ಚೌಹಾಣ್ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ, ನವೆಂಬರ್ ನಲ್ಲಿ ನಡೆದಿದ್ದ ಚುನಾವಣೆಯಲ್ಲಿ 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿಯು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತ್ತು.
ಸದ್ಯ, ಶಿವರಾಜ್ ಚೌಹಾಣ್ ಅವರ ಹೇಳಿಕೆಯನ್ನು ಅವರು ಸ್ವಪಕ್ಷದ ಕುರಿತು ವ್ಯಕ್ತಪಡಿಸಿರುವ ಅಸಮಾಧಾನ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.