ಬಿಡುಗಡೆಯ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ರನ್ನು ಮತ್ತೆ ವಶಕ್ಕೆ ಪಡೆದ ಪೊಲೀಸರು
ಮುಂದುವರಿದ ಆಮರಣಾಂತ ಉಪವಾಸ
ಸೋನಮ್ ವಾಂಗ್ಚುಕ್ (Photo: PTI)
ಹೊಸದಿಲ್ಲಿ: ಪೊಲೀಸ್ ಠಾಣೆಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಹಾಗೂ ಇನ್ನಿತರ 150 ಮಂದಿ ಲಡಾಖ್ ಪ್ರಜೆಗಳನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದರೂ, ಅವರನ್ನು ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಸೋನಮ್ ವಾಂಗ್ಚುಕ್ ಹಾಗೂ ಇನ್ನಿತರ ಲಡಾಖ್ ಪ್ರಜೆಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದರೂ, ಅವರು ದಿಲ್ಲಿಯ ಕೇಂದ್ರ ಭಾಗಕ್ಕೆ ಮೆರವಣಿಗೆಯಲ್ಲಿ ತೆರಳಲು ಪಟ್ಟು ಹಿಡಿದಿದ್ದರಿಂದ, ಅವರನ್ನು ಮತ್ತೆ ವಶಕ್ಕೆ ಪಡೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವಾಂಗ್ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಯಲ್ಲಿ ಅವರ ಕೆಲವು ಸಹಚರರೊಂದಿಗಿರಿಸಿದ್ದರೆ, ಉಳಿದವರನ್ನು ನರೇಲಾ ಕೈಗಾರಿಕಾ ಪ್ರದೇಶ, ಆಲಿಪುರ್ ಹಾಗೂ ಕಂಝಾವಾಲ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ತಮ್ಮ ಆಗ್ರಹಗಳ ಈಡೇರಿಕೆಗಾಗಿ ವಾಂಗ್ಚುಕ್ ಅವರು ತಮ್ಮ ಸಹಚರರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಾಜ್ಞೆ ಇದ್ದರೂ ಪ್ರವೇಶಿಸಲು ಯತ್ನಿಸಿದ್ದರಿಂದ, ಅವರನ್ನು ಸೋಮವಾರ ರಾತ್ರಿ ಸಿಂಘು ಗಡಿಯಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದರು.
ಸೋನಮ್ ವಾಂಗ್ಚುಕ್ ಕಳೆದ ತಿಂಗಳಿಂದ ಲೇಹ್ ನಿಂದ ದಿಲ್ಲಿಯವರೆಗೆ ‘ದಿಲ್ಲಿ ಚಲೊ ಪಾದಯಾತ್ರೆ’ ನಡೆಸುತ್ತಿದ್ದಾರೆ.