ಸೋನಿಯಾ ವಿರುದ್ಧ ಹೇಳಿಕೆಗಾಗಿ ಕ್ಷಮೆ ಯಾಚಿಸಿ : ಕಂಗನಾಗೆ ಕಾಂಗ್ರೆಸ್ ಎಚ್ಚರಿಕೆ
ಕಂಗನಾ ರಣಾವತ್ | PC : PTI
ಹೊಸದಿಲ್ಲಿ : ಹಿಮಾಚಲ ಪ್ರದೇಶದಲ್ಲಿಯ ತನ್ನ ಸರಕಾರವು ವಿಪತ್ತು ಪರಿಹಾರಕ್ಕಾಗಿ ಮೀಸಲಾಗಿದ್ದ ಹಣವನ್ನು ಅಕ್ರಮವಾಗಿ ಸೋನಿಯಾ ಗಾಂಧಿಯವರಿಗೆ ವರ್ಗಾಯಿಸಿದೆ ಎಂಬ ಬಿಜೆಪಿ ಸಂಸದೆ ಕಂಗನಾ ರಣಾವತ್ರ ಆರೋಪದಿಂದ ಕೆಂಡಾಮಂಡಲಗೊಂಡಿರುವ ಕಾಂಗ್ರೆಸ್, ಇದಕ್ಕಾಗಿ ಕ್ಷಮೆ ಯಾಚಿಸುವಂತೆ ಇಲ್ಲವೇ ಕಾನೂನುಕ್ರಮವನ್ನು ಎದುರಿಸುವಂತೆ ಎಚ್ಚರಿಕೆ ನೀಡಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ತನ್ನ ಆರೋಪವನ್ನು ಹಿಂದೆಗೆದುಕೊಳ್ಳುವಂತೆ ಅಥವಾ ಕಾನೂನುಕ್ರಮವನ್ನು ಎದುರಿಸುವಂತೆ ಕಂಗನಾಗೆ ಎಚ್ಚರಿಕೆ ನೀಡಿದ ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು,‘ಕಂಗನಾ ತನ್ನ ಹೇಳಿಕೆಯನ್ನು ಹಿಂದೆಗೆದುಕೊಳ್ಳದಿದ್ದರೆ ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುತ್ತೇವೆ. ಯಾವ ಆಧಾರದಲ್ಲಿ ಈ ಆರೋಪವನ್ನು ಅವರು ಮಾಡಿದ್ದಾರೆ? ಅವರು ಸೋನಿಯಾ ಗಾಂಧಿಯವರಂತಹ ಉನ್ನತ ನಾಯಕಿಯ ವಿರುದ್ಧ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರವಾಗಿದೆ ’ ಎಂದರು.
‘ಕೇಂದ್ರದಿಂದ ಬರುವ ಅಥವಾ ರಾಜ್ಯದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಸೋನಿಯಾ ಗಾಂಧಿಯವರಿಗೆ ನೀಡಲಾಗುತ್ತದೆ ಎನ್ನುವುದಕ್ಕಿಂತ ಹೆಚ್ಚು ಮೂರ್ಖತನದ ಹೇಳಿಕೆ ಇನ್ನೊಂದಿರಲು ಸಾಧ್ಯವಿಲ್ಲ. ಒಂದೇ ಒಂದು ರೂಪಾಯಿ ದುರ್ಬಳಕೆಗೆ ಪುರಾವೆ ನೀಡಿ ಅಥವಾ ಇಂತಹ ಆಧಾರರಹಿತ ಆರೊಪಗಳಿಗಾಗಿ ಸೋನಿಯಾರ ಕ್ಷಮೆಯನ್ನು ಯಾಚಿಸಿ ಎಂದು ನಾನು ಕಂಗನಾರಿಗೆ ಬಹಿರಂಗವಾಗಿ ಸವಾಲು ಹಾಕುತ್ತೇನೆ ’ ಎಂದು ಹೇಳಿದರು.
ಕಂಗನಾರ ಬೌದ್ಧಿಕ ದಿವಾಳಿತನವನ್ನೂ ಟೀಕಿಸಿದ ಸಿಂಗ್, ರೈತರ ಪ್ರತಿಭಟನೆಗಳ ಕುರಿತು ಹೇಳಿಕೆಗಳಿಗಾಗಿ ಕಳೆದ ತಿಂಗಳಷ್ಟೇ ಅವರು ತನ್ನ ಪಕ್ಷದಿಂದ ವಾಗ್ದಂಡನೆಗೆ ಒಳಗಾಗಿದ್ದರು ಎಂದು ಬೆಟ್ಟು ಮಾಡಿದರು.
ಸೂಕ್ಷ್ಮ ವಿಷಯಗಳ ಕುರಿತು ಮಾತನಾಡದಂತೆ ಬಿಜೆಪಿ ಈಗಾಗಲೇ ಅವರಿಗೆ ಎಚ್ಚರಿಕೆ ನೀಡಿದೆ. ಆದರೂ ಹೈಕಮಾಂಡ್ ಸಲಹೆಗೆ ಅವರು ಕಿವಿಗೊಟ್ಟಿಲ್ಲ ಎಂಬಂತೆ ಕಾಣುತ್ತಿದೆ ಎಂದು ಸಿಂಗ್ ಹೇಳಿದರು.