ಲೋಕಸಭಾ ಇನಿಂಗ್ಸ್ ಮುಗಿಸುವ ಸುಳಿವು ನೀಡಿದ ಸೋನಿಯಾ ಗಾಂಧಿ ?
Photo: PTI
ಹೊಸದಿಲ್ಲಿ: ಕಾಂಗ್ರೆಸ್ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ತಮ್ಮ ಲೋಕಸಭಾ ಇನಿಂಗ್ಸ್ ಮುಗಿಸುವ ಸುಳಿವು ನೀಡಿದ್ದು, ಬುಧವಾರ ಜೈಪುರದಿಂದ ರಾಜ್ಯಸಭೆ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಮೂಲಕ ಸಂಸತ್ತಿನ ಕೆಳಮನೆಯಿಂದ ಮೇಲ್ಮನೆ ಪ್ರವೇಶಿಸುವ ಸಾಧ್ಯತೆ ನಿಚ್ಚಳವಾಗಿದೆ.
ಪಕ್ಷದ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಎರಡನೇ ಸ್ತರದ ನಾಯಕರು ಸೋನಿಯಾ ಗಾಂಧಿಯ ಜತೆಗಿದ್ದು, ಈ ಕ್ಷಣವನ್ನು ಸ್ಮರಣೀಯವಾಗಿಸಲು ಬಯಸಿದ್ದಾರೆ ಎಂದು ಹೇಳಲಾಗಿದೆ.
ಸೋನಿಯಾ ರಾಜ್ಯಸಭೆ ಪ್ರವೇಶ, ಚುನಾವಣಾ ರಾಜಕೀಯದಿಂದ ಈ ಹಿರಿಯ ನಾಯಕಿ ನಿವೃತ್ತರಾಗುತ್ತಿರುವುದನ್ನು ಇದು ಸೂಚಿಸಿದೆ. ಐದು ಬಾರಿ ಲೋಕಸಭೆ ಸದಸ್ಯರಾಗಿದ್ದ ಅವರು ಕೊನೆಯ ಬಾರಿ 2019ರಲ್ಲಿ ರಾಯ್ ಬರೇಲಿಯಿಂದ ಚುನಾಯಿತರಾಗಿದ್ದರು. ಇದು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಏಕೈಕ ಸ್ಥಾನವಾಗಿತ್ತು. ಆರೋಗ್ಯ ಕಾರಣಗಳಿಂದ ಸೋನಿಯಾ ಚುನಾವಣಾ ರಾಜಕೀಯದಿಂದ ದೂರ ಉಳಿಯಲು ಬಯಸಿದ್ದು, ಈ ಕಾರಣಕ್ಕೆ ರಾಜ್ಯಸಭೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋನಿಯಾ ಗಾಂಧಿ ಅವರು ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಿಂದ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಿದ್ದು, ಕೊನೆಗೆ ರಾಜಸ್ಥಾನದಿಂದಲೇ ಸ್ಪರ್ಧಿಸುವ ನಿರ್ಧಾರಕ್ಕೆ ಬಂದರು. ದೊಡ್ಡ ರಾಜ್ಯದಿಂದ ಸ್ಪರ್ಧಿಸುವುದು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕಿಯ ಸಂದೇಶ ರವಾನೆಗೆ ನೆರವಗಲಿದೆ ಎಂದು ಪಕ್ಷದ ತಂತ್ರಜ್ಞರು ಹಾಗೂ ಹಿರಿಯ ಮುಖಂಡರು ನಿರ್ಧಾರಕ್ಕೆ ಬಂದರು ಎಂದು ಉನ್ನತ ಮೂಲಗಳು ಹೇಳಿವೆ.