ಜಯಾ ಬಚ್ಚನ್ ಹಾಗೂ ರಾಜ್ಯಸಭಾಧ್ಯಕ್ಷರ ನಡುವೆ ವಾಗ್ವಾದ; ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭಾತ್ಯಾಗ
ಅಮಿತಾಭ್ ಹೆಸರು ಸೇರಿಸುವುದಕ್ಕೆ ಜಯಾ ಬಚ್ಚನ್ ಮತ್ತೆ ಆಕ್ಷೇಪ; ಕ್ಷಮೆಯಾಚನೆಗೆ ಆಗ್ರಹ
ಜಗದೀಪ್ ಧನ್ಕರ್ / ಜಯಾ ಬಚ್ಚನ್ (Photo: Sansad TV)
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ‘ಜಯಾ ಅಮಿತಾಭ್ ಬಚ್ಚನ್’ ವಿವಾದ ಮತ್ತೆ ಮಾರ್ದನಿಸಿದ್ದರಿಂದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ವಿಪಕ್ಷಗಳು ಸಭಾತ್ಯಾಗ ನಡೆಸಿದವು. ತಮ್ಮನ್ನು ಜಯಾ ಅಮಿತಾಭ್ ಬಚ್ಚನ್ ಎಂದು ಸಂಬೋಧಿಸುವುದರ ವಿರುದ್ಧ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಈ ಮುನ್ನ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಂಸದೀಯ ಕಲಾಪಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ವಿವಾಹವಾಗಿರುವ ಜಯಾ ಬಚ್ಚನ್ ಅವರ ಹೆಸರನ್ನು ಎರಡು ಬಾರಿ ಜಯಾ ಅಮಿತಾಭ್ ಬಚ್ಚನ್ ಎಂದು ಸಂಬೋಧಿಸಲಾಗಿತ್ತು. ಇದರ ವಿರುದ್ಧ ಜಯಾ ಬಚ್ಚನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪರಿಪಾಠದ ವಿರುದ್ಧ ಜಯಾ ಬಚ್ಚನ್ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭಾತ್ಯಾಗ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ನಿಜಕ್ಕೂ ತೀರಾ ಅಪಮಾನಕಾರಿ ಅನುಭವ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತಾರೂಢ ಬಿಜೆಪಿ ಹಾಗೂ ಅದರ ಮೈತ್ರಿಪಕ್ಷಗಳಿಗೆ ನೀಡುತ್ತಿರುವ ಗೌರವವನ್ನು ವಿರೋಧ ಪಕ್ಷಗಳ ಸಂಸದರಿಗೆ ನೀಡಲಾಗುತ್ತಿಲ್ಲ ಎಂದೂ ಅವರು ಟೀಕಿಸಿದರು.
ಇಂದು ಮಧ್ಯಾಹ್ನ ಕೂಡಾ ಜಯಾ ಬಚ್ಚನ್ ಅವರನ್ನು ಜಯಾ ಅಮಿತಾಭ್ ಬಚ್ಚನ್ ಎಂದು ಸಂಬೋಧಿಸಲಾಯಿತು. ಇದರ ವಿರುದ್ಧ ಜಯಾ ಬಚ್ಚನ್ ಮತ್ತೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಆದರೆ, ಸಭಾಧ್ಯಕ್ಷ ಜಗದೀಪ್ ಧನಕರ್, “ನನಗೆ ಪಾಠ ಹೇಳಲು ಬರಬೇಡಿ” ಎಂದು ತಿರುಗೇಟು ನೀಡಿದರು.
ಸಭಾಧ್ಯಕ್ಷರ ಮಾತಿಗೆ ಜಗ್ಗದ ಜಯಾ ಬಚ್ಚನ್ ತಮ್ಮ ನಿಲುವಿಗೆ ಅಂಟಿಕೊಂಡರು ಹಾಗೂ ಕ್ಷಮೆ ಯಾಚನೆಗಾಗಿ ಒತ್ತಾಯಿಸಿದರು. “ನನಗೆ ಸಭಾಧ್ಯಕ್ಷರ ಪೀಠದಿಂದ ಕ್ಷಮೆ ಯಾಚನೆ ಬೇಕಿದೆ” ಎಂದು ಅವರು ಆಗ್ರಹಿಸಿದರು. ಇದರ ಬೆನ್ನಿಗೇ ರಾಜ್ಯಸಭೆಯಲ್ಲಿ ವಿಪಕ್ಷಗಳ ಸಂಸದರಿಂದ ಸಭಾಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ತೀವ್ರ ಪ್ರತಿಭಟನೆ ನಡೆಯಿತು. ನಂತರ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.