ಉಗ್ರರಿಗಾಗಿ ಕಂಬನಿ ಮಿಡಿದಿದ್ದ ಸೋನಿಯಾ ಗಾಂಧಿ: ಜೆ.ಪಿ.ನಡ್ಡಾ ಆರೋಪ
Photo: PTI
ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 2008ರ ಬಾಟ್ಲಾಹೌಸ್ ಎನ್ ಕೌಂಟರ್ ಬಳಿಕ ಉಗ್ರರಿಗಾಗಿ ಕಂಬನಿ ಮಿಡಿದಿದ್ದರು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಬಿಹಾರದ ಮಧುಬಾನಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬೆಂಬಲಕ್ಕೆ ಸದಾ ಕಾಂಗ್ರೆಸ್ ಪಕ್ಷ ನಿಂತಿದೆ ಎಂದು ಅವರು ಆಪಾದಿಸಿದ್ದಾರೆ.
ದೇಶದ್ರೋಹಿಗಳ ಜತೆ ಸೋನಿಯಾಗಾಂಧಿ ಯಾವ ನಂಟು ಹೊಂದಿದ್ದಾರೆ ಎಂದು ಅವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
"ಬಾಟ್ಲಾ ಎನ್ ಕೌಂಟರ್ ಸಂದರ್ಭದಲ್ಲಿ ಉಗ್ರರು ಹತ್ಯೆಗೀಡಾದರು ಮತ್ತು ಸೋನಿಯಾಗಾಂಧಿ ಈ ಸಂದರ್ಭದಲ್ಲಿ ಅತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ದೇಶದ್ರೋಹಿಗಳ ಜತೆ ನಿಮ್ಮ ಸಂಬಂಧ ಏನು? ನಿಮ್ಮ ಅನುಕಂಪದ ಕಾರಣ ಏನು? ಅವರಲ್ಲಿ ಏನನ್ನು ನೀವು ಇಷ್ಟಪಡುತ್ತೀರಿ? ಎಂದು ವ್ಯಂಗ್ಯವಾಡಿದರು.
2008 ಸೆಪ್ಟೆಂಬರ್ ನಲ್ಲಿ ಬಾಟ್ಲಾಹೌಸ್ ಎನ್ ಕೌಂಟರ್ ಸಂದರ್ಭದಲ್ಲಿ ದೆಹಲಿ ಪೊಲೀಸ್ ಇನ್ ಸ್ಪೆಕ್ಟರ್ ಮೋಹನ್ ಶರ್ಮಾ ಮತ್ತು ಅತ್ಲೀಫ್ ಮತ್ತು ಸಾಜೀದ್ ಎಂಬ ಇಬ್ಬರು ಉಗ್ರರು ಮೃತಪಟ್ಟಿದ್ದರು.
ಇಂಡಿಯಾ ಮೈತ್ರಿಕೂಟವನ್ನು ನಡ್ಡಾ ದುಷ್ಟಕೂಟ ಎಂದು ಬಣ್ಣಿಸಿದ ಜೆ ಪಿ ನಡ್ಡಾ ಅವರು, ಕಾಂಗ್ರೆಸ್ ಪಕ್ಷ ದೇಶವನ್ನು ದುರ್ಬಲಗೊಳಿಸುವವರ ಬಗ್ಗೆ ಅನುಕಂಪ ಇರುವವರ ಪರವಾಗಿದೆ. ನೀವು ಅವರನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದರು.