ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ | ಜಾಮೀನು ವಿರುದ್ಧದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಆರೋಪಿಗಳಿಗೆ ಸುಪ್ರೀಂ ನಿರ್ದೇಶನ
ಸೌಮ್ಯಾ ವಿಶ್ವನಾಥನ್ | PC : NDTV
ಹೊಸದಿಲ್ಲಿ: ಟಿವಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಾಲ್ವರು ಅಪರಾಧಿಗಳಿಗೆ ದಿಲ್ಲಿ ಉಚ್ಛ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸೌಮ್ಯಾ ವಿಶ್ವನಾಥನ್ ಅವರ ತಾಯಿ ಸಲ್ಲಿಸಿದ ಅರ್ಜಿಯ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸು ಜಾರಿ ಮಾಡಿದೆ.
ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರನ್ನು ಒಳಗೊಂಡ ಪೀಠ ನಾಲ್ವರು ಅಪರಾಧಿಗಳು ಹಾಗೂ ದಿಲ್ಲಿ ಸರಕಾರಕ್ಕೆ ನೋಟಿಸು ಜಾರಿ ಮಾಡಿದ್ದು, ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.
ದಿಲ್ಲಿ ಉಚ್ಛ ನ್ಯಾಯಾಲಯ ಫೆಬ್ರವರಿ 12ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಸೌಮ್ಯಾ ವಿಶ್ವನಾಥನ್ ಅವರ ತಾಯಿ ಮಾಧವಿ ವಿಶ್ವನಾಥನ್ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ದಿಲ್ಲಿ ಉಚ್ಛ ನ್ಯಾಯಾಲಯ ಅಪರಾಧಿಗಳು ತಮ್ಮ ದೋಷಿತ್ವ ಹಾಗೂ ಜೀವಾವಧಿ ಕಾರಾಗೃಹ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಬಾಕಿ ಇರುವವರೆಗೆ ಅಪರಾಧಿಗಳ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿತ್ತು.
ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ರವಿ ಕಪೂರ್, ಅಮಿತ್ ಶುಕ್ಲಾ, ಬಲಜೀತ್ ಸಿಂಗ್ ಮಲಿಕ್ ಹಾಗೂ ಅಜಯ್ ಕುಮಾರ್ ಅಪರಾಧಿಗಳಾಗಿದ್ದಾರೆ. ಇವರಲ್ಲಿ ಕಪೂರ್, ಶುಕ್ಲಾ ಹಾಗೂ ಮಲಿಕ್ 2009ರ ಜಿಗಿಶಾ ಘೋಷ್ ಹತ್ಯೆ ಪ್ರಕರಣದಲ್ಲಿ ಕೂಡ ಅಪರಾಧಿಗಳಾಗಿದ್ದಾರೆ.
ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಾ ವಿಶ್ವನಾಥನ್ ಅವರು ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ 2008 ಸೆಪ್ಟಂಬರ್ 30ರಂದು ದಕ್ಷಿಣ ದಿಲ್ಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.