ದಕ್ಷಿಣ ಭಾರತದಲ್ಲಿ ಈ ಬಾರಿಯೂ ಬಿಜೆಪಿ ಪ್ರಾಬಲ್ಯಕ್ಕೆ ಹೊಡೆತ: ತಮಿಳುನಾಡು ಸಿಎಂ ಸ್ಟಾಲಿನ್
Photo:PTI
ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೂಡಾ ದಕ್ಷಿಣ ಭಾರತದಲ್ಲಿ ಮತದಾರರು ಬಿಜೆಪಿಯ ಪ್ರಾಬಲ್ಯಕ್ಕೆ ದೊಡ್ಡ ಹೊಡೆತ ನೀಡಲಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಮೊದಲ ಹಂತದ ಚುನಾವಣೆ ಏಪ್ರಿಲ್ 19ಕ್ಕೆ ತಮಿಳುನಾಡಿನಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, "ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಬಿಜೆಪಿ ರಾಜ್ಯಪಾಲರ ಮೂಲಕ ಅಸಹಕಾರ ನೀಡುತ್ತಿದೆ. ಜತೆಗೆ ಕಚತೀವು ದ್ವೀಪದ ವಿವಾದವನ್ನು ಅನಗತ್ಯವಾಗಿ ಕೆದಕಿದೆ" ಎಂದು ದೂರಿದ್ದಾರೆ.
"ಇದು ಸಿದ್ಧಾಂತಗಳ ನಡುವಿನ ಸಮರ; ಬಿಜೆಪಿಯ ಸಿದ್ಧಾಂತಕ್ಕೆ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಪ್ರಭುತ್ವ, ಬ್ರಾತೃತ್ವ, ಜಾತ್ಯತೀತತೆಯಂಥ ದ್ರಾವಿಡ ಮುನ್ನೇತ್ರ ಕಳಗಂ ನಂಬಿಕೊಂಡು ಬಂದಿರುವ ಸಿದ್ಧಾಂತ ಸವಾಲಾಗಲಿದೆ. ಈ ಕಾರಣದಿಂದ ನಾವು ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇನ್ನೊಂದೆಡೆ ಎಐಎಡಿಎಂ ಅವಕಾಶವಾದಿ ಪಕ್ಷ ಹಾಗೂ ಸೈದ್ಧಾಂತಿಕವಾಗಿ ದಿವಾಳಿತನದಿಂದಾಗಿ ಬಿಜೆಪಿಗೆ ಶರಣಾಗಿದೆ. ಹೀಗೆ ನಾವು ಎರಡು ಪಕ್ಷಗಳನ್ನು ಪ್ರತ್ಯೇಕಿಸುತ್ತೇವೆ" ಎಂದು ಬಣ್ಣಿಸಿದರು.
ಬಿಜೆಪಿ ದಕ್ಷಿಣ ಭಾರತದಲ್ಲಿ ಬಲವರ್ಧನೆಗೆ ಪ್ರಯತ್ನಿಸುತ್ತಿದ್ದು, ಅದನ್ನು ಎದುರಿಸಲು ಡಿಎಂಕೆ ಸಜ್ಜಾಗಿದೆಯೇ ಎಂಬ ಪ್ರಶ್ನೆಗೆ, "ವಾಸ್ತವವೆಂದರೆ ಉತ್ತರದಲ್ಲೂ ಬಿಜೆಪಿ ಪ್ರಭಾವ ನಶಿಸುತ್ತಿದೆ. ಮೋದಿ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಭಾರತದ ಪ್ರತಿ ಕುಟುಂಬಗಳಿಗೂ ತೊಂದರೆಯಾಗಿವೆ. ಬಡವರು, ಕೃಷಿಕರು, ಉದ್ಯಮಿಗಳು, ಗೃಹಿಣಿಯರು, ವಿದ್ಯಾರ್ಥಿಗಳು, ಮೀನುಗಾರರು ಮತ್ತು ಯುವಕರು ಹೀಗೆ ಬಿಜೆಪಿಯ ಆಡಳಿತದಿಂದ ನೋವು ಅನುಭವಿಸುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರ ಮೋದಿಯವರ ಕಪಟವನ್ನು ಬಹಿರಂಗಪಡಿಸಿದೆ. ಉತ್ತರ ಭಾರತದಲ್ಲೂ ಬಿಜೆಪಿ ಇಮೇಜ್ ಛಿದ್ರವಾಗಿದೆ ಎಂದು ವಿಶ್ಲೇಷಿಸಿದರು.