ದಕ್ಷಿಣದ ದೇಶಗಳು ಆಹಾರ, ಇಂಧನ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿವೆ : ಪ್ರಧಾನಿ ಮೋದಿ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಾಗತಿಕ ಅನಿಶ್ಚಿತತೆಗಳು ಅಭಿವೃದ್ಧಿಶೀಲ ದೇಶಗಳ ಮೇಲೆ, ವಿಶೇಷವಾಗಿ ಆಹಾರ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿ ಬೀರುವ ಪರಿಣಾಮಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದರು.
ಭಾರತವು ವರ್ಚುವಲ್ ರೂಪದಲ್ಲಿ ಆಯೋಜಿಸಿದ ತೃತೀಯ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ತನ್ನ ಆರಂಭಿಕ ಭಾಷಣದಲ್ಲಿ ಮೋದಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ದಕ್ಷಿಣದ ದೇಶಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸುವ ಅಚಲ ಬದ್ಧತೆಯನ್ನು ಭಾರತವು ಹೊಂದಿದೆ ಎಂದು ಭರವಸೆಯನ್ನೂ ನೀಡಿದರು.
‘ಸುತ್ತಲೂ ಅನಿಶ್ಚಿತತೆಯ ವಾತಾವರಣವಿರುವ ಈ ಸಮಯದಲ್ಲಿ ನಾವು ಭೇಟಿಯಾಗುತ್ತಿದ್ದೇವೆ. ಜಗತ್ತು ಇನ್ನೂ ಕೋವಿಡ್ ಪ್ರಭಾವದಿಂದ ಸಂಪೂರ್ಣವಾಗಿ ಹೊರಕ್ಕೆ ಬಂದಿಲ್ಲ. ಮತ್ತೊಂದೆಡೆ ಯುದ್ಧದ ಪರಿಸ್ಥಿತಿಯು ನಮ್ಮ ಅಭಿವೃದ್ಧಿ ಪಯಣಕ್ಕೆ ಸವಾಲುಗಳನ್ನು ಒಡ್ಡಿದೆ. ನಾವು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುತ್ತಿರುವುದು ಮಾತ್ರವಲ್ಲ,ಆರೋಗ್ಯ ಭದ್ರತೆ,ಆಹಾರ ಭದ್ರತೆ ಮತ್ತು ಇಂಧನ ಭದ್ರತೆಯ ಕಳವಳಗಳೂ ನಮ್ಮ ಮುಂದಿವೆ’ ಎಂದು ಅವರು ಹೇಳಿದರು.
ಉಗ್ರವಾದ ಮತ್ತು ಪ್ರತ್ಯೇಕತಾವಾದ ಒಡ್ಡಿರುವ ಸವಾಲುಗಳನ್ನೂ ಪ್ರಸ್ತಾವಿಸಿದ ಪ್ರಧಾನಿ,‘ಇವು ನಮ್ಮ ಸಮಾಜಗಳಿಗೆ ಗಂಭೀರ ಬೆದರಿಕೆಗಳಾಗಿಯೇ ಉಳಿದಿವೆ. ತಂತ್ರಜ್ಞಾನ ವಿಭಜನೆ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳೂ ಹೊರಹೊಮ್ಮುತ್ತಿವೆ. ಕಳೆದ ಶತಮಾನದಲ್ಲಿ ರಚಿಸಲಾದ ಜಾಗತಿಕ ಆಡಳಿತ ಮತ್ತು ಹಣಕಾಸು ಸಂಸ್ಥೆಗಳಿಗೆ ಈ ಶತಮಾನದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ’ ಎಂದರು.
ವಾಯ್ಸ್ ಆಫ್ ಗ್ಲೋಬಲ್ ಶೃಂಗಸಭೆಯು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಭಾರತವು ತನ್ನ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ದಕ್ಷಿಣ ದೇಶಗಳ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಆದ್ಯತೆಗಳನ್ನು ಆಧರಿಸಿ ಗುಂಪುಗಳ ರಚನೆಯ ಕಾರ್ಯಸೂಚಿಯನ್ನು ರೂಪಿಸಿತ್ತು ಎಂದು ಹೇಳಿದ ಮೋದಿ,‘ದಕ್ಷಿಣ ದೇಶಗಳ ಶಕ್ತಿ ಅದರ ಒಗ್ಗಟ್ಟಿನಲ್ಲಿ ಅಡಗಿದೆ. ಈ ಒಗ್ಗಟ್ಟಿನ ಬಲದಲ್ಲಿ ನಾವು ಹೊಸ ದಿಕ್ಕಿನತ್ತ ಮುಂದೆ ಸಾಗುತ್ತೇವೆ ’ ಎಂದರು.
ಅಭಿವೃದ್ಧಿಶೀಲ ದೇಶಗಳು ನಿಗದಿಗೊಳಿಸಿದ ಆದ್ಯತೆಗಳ ಆಧಾರದಲ್ಲಿ ‘ಗ್ಲೋಬಲ್ ಡೆವಲಪ್ಮೆಂಟ್ ಕಾಂಪ್ಯಾಕ್ಟ್’ ರಚನೆಯನ್ನು ಪ್ರಸ್ತಾವಿಸಿದ ಮೋದಿ, ವ್ಯಾಪಾರವನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಭಾರತವು ದಕ್ಷಿಣ ದೇಶಗಳೊಂದಿಗೆ ತನ್ನ ಸಾಮರ್ಥ್ಯಗಳನ್ನು ಹಂಚಿಕೊಳ್ಳಲಿದೆ ಎಂದು ಹೇಳಿದರು.
ಉದಯೋನ್ಮುಖ ಆರ್ಥಿಕತೆಗಳಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಬಳಕೆಯನ್ನು ಹೆಚ್ಚಿಸಲು ಸ್ಥಾಪಿಸಲಾಗಿರುವ ಸೋಷಿಯಲ್ ಇಂಪ್ಯಾಕ್ಟ್ ಫಂಡ್ಗೆ 25 ಮಿಲಿಯನ್ ಡಾಲರ್ಗಳ ಆರಂಭಿಕ ದೇಣಿಗೆಯನ್ನು ಮೋದಿ ಪ್ರಕಟಿಸಿದರು.