ಮಹಾರಾಷ್ಟ್ರ | ಬಾಬರಿ ಮಸೀದಿ ಧ್ವಂಸದ ಕುರಿತು ಶಿವಸೇನೆ ನಿಲುವು ವಿರೋಧಿಸಿ MVA ಮೈತ್ರಿಯಿಂದ ಹೊರನಡೆದ ಸಮಾಜವಾದಿ ಪಕ್ಷ
ಅಖಿಲೇಶ್ ಯಾದವ್ / ಉದ್ಧವ್ ಠಾಕ್ರೆ (Photo: PTI)
ಮುಂಬೈ: ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ನಿಲುವನ್ನು ವಿರೋಧಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಸಮಾಜವಾದಿ ಪಕ್ಷ (ಎಸ್ಪಿ) ಪ್ರಕಟಿಸಿದೆ.
ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಜ್ಮಿ ಶನಿವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಮಿಲಿಂದ್ ನಾರ್ವೇಕರ್, ಬಾಳಾಸಾಹೇಬ್ ಠಾಕ್ರೆ, ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರ ಫೋಟೋಗಳನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮದ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಬಾಬರಿ ಮಸೀದಿ ಧ್ವಂಸಕ್ಕಾಗಿ ಕರಸೇವಕರನ್ನು ಶ್ಲಾಘಿಸಿದ ಬಾಳಾಸಾಹೇಬ್ ಅವರ ʼಇದನ್ನು ಯಾರು ಮಾಡಿದವರು, ಅವರ ಬಗ್ಗೆ ನನಗೆ ಹೆಮ್ಮೆ ಇದೆʼ ಹೇಳಿಕೆಯನ್ನು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಬೆನ್ನಲ್ಲೇ ಉದ್ಧವ್ ನೇತೃತ್ವದ ಶಿವಸೇನೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೇ ಮತ್ತು ಕಠಿಣ ಹಿಂದುತ್ವದ ನಿಲುವಿಗೆ ಮರಳುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷವು ಇಬ್ಬರು ಶಾಸಕರನ್ನು ಹೊಂದಿದೆ. ಎಂವಿಎ ಮೈತ್ರಿ ಪಕ್ಷಗಳು ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಹೊರಗುಳಿಯುವಂತೆ ಕರೆ ನೀಡಲಾಗಿತ್ತು. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಸಿಮ್ ಅಜ್ಮಿ ಮತ್ತು ಪಕ್ಷದ ನಾಯಕ ರೈಸ್ ಶೇಖ್ ಅವರು ಬಹಿಷ್ಕಾರದ ಕರೆಯನ್ನು ಧಿಕ್ಕರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
— Milind Narvekar (@NarvekarMilind_) December 5, 2024